ಬಿಜೆಪಿಗರು ಮೋದಿಯವರ ರಾಜೀನಾಮೆ ಕೇಳಲಿ: ಬಿ.ಸುಬ್ರಹ್ಮಣ್ಯ

Spread the love

ಮೈಸೂರು: ಹೆಣದ ಮೇಲೆ ರಾಜಕೀಯ ಮಾಡಲು ಹೊರಟಿರುವ ಬಿಜೆಪಿಗರು ಮೊದಲು ಪ್ರಧಾನಿ ಮೋದಿ, ರೈಲ್ವೆ ಸಚಿವರ ರಾಜೀನಾಮೆ ಕೇಳಲಿ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ.

ಬೆಂಗಳೂರಿನ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ ವಿಚಾರ ಪ್ರತಿಕ್ರಿಯಿಸಿರುವ ಸುಬ್ರಹ್ಮಣ್ಯ ಅವರು, ಥಾಣೆಯಲ್ಲಿ ರೈಲಿನಿಂದ ಐವರು ಬಿದ್ದು ಸಾವನ್ನಪ್ಪಿದ್ದಾರೆ. ಆದರೆ ಬಿಜೆಪಿ ನೇತೃತ್ವದ ಆಡಳಿತ ವಿರುದ್ಧ ಮಹಾರಾಷ್ಟ್ರ ಸರ್ಕಾರವಾಗಲಿ, ರೈಲ್ವೆ ಸಚಿವರಾಗಲಿ ರಾಜೀನಾಮೆ ಕೊಟ್ಟಿದ್ದಾರಾ ಅಂತ ಪ್ರಶ್ನಿಸಿದ್ದಾರೆ.

ಮಹಾ ಕುಂಭಮೇಳದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಈವರೆಗೂ ಪರಿಹಾರ ಕೊಟ್ಟಿಲ್ಲ, ಅಲಹಾಬಾದ್‌ ಹೈಕೋರ್ಟ್‌ ಕೂಡ ಇದಕ್ಕೆ ಛೀಮಾರಿ ಹಾಕಿದೆ. ಇದರ ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ ಅವರೇನಾದರೂ ರಾಜೀನಾಮೆ ಕೊಡುತ್ತಾರೆಯೆ ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.

ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟಿದ್ದಕ್ಕೆ ಆಪರೇಷ್‌ ಸಿಂಧೂರ ಆಯ್ತು, ಆದ್ರೆ ಸಂತ್ರಸ್ತರಿಗೆ ಏನು ಪರಿಹಾರ ಕೊಟ್ಟಿದ್ದಾರೆ ಎಂದು ಕೇಳಿರುವ ಸುಬ್ರಹ್ಮಣ್ಯ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಘಟನೆ ನಡೆದ ಒಂದು ವಾರದೊಳಗೆ ಸಂತ್ರಸ್ತರ ಮನೆ ಬಾಗಿಲಿಗೆ ಪರಿಹಾರದ ಹಣ ತಲುಪಿಸಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಬಿಜೆಪಿ ನಾಯಕರು ಕೇಂದ್ರದ ವೈಫಲ್ಯಗಳನ್ನೇಕೆ ಮುಚ್ಚಿಕೊಳ್ಳುತ್ತಾರೆ,ನೈತಿಕತೆ ಇದ್ದರೆ ಮೊದಲು ಮೋದಿ ಅವರ ರಾಜೀನಾಮೆ ಕೇಳಲಿ ಎಂದು ಒತ್ತಾಯಿಸಿದ್ದಾರೆ.

ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಪ್ರತಿ ಬಾರಿ ಮಾತನಾಡುವಾಗಲೂ ಹಿಂದೂ ಮುಸ್ಲಿಮರ ನಡುವೆ ಒಡಕುಂಟು ಮಾಡುವಂತೆ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ರಾಜ್ಯದ ಸೌಹಾರ್ದತೆಯನ್ನು ಹಾಳುಗೆಡವುವ ಪ್ರಯತ್ನ ಮಾಡ್ತಿದ್ದಾರೆ ಎಂದು ಸುಬ್ರಹ್ಮಣ್ಯ ಆರೋಪಿಸಿದ್ದಾರೆ.

ನಿರ್ಗಮಿತ ಪೊಲೀಸ್‌ ಆಯುಕ್ತ ಬಿ. ದಯಾನಂದ್‌ ಅವರನ್ನು ವಾಲ್ಮೀಕಿ ಸಮುದಾಯದವರು ಅಂತ ಅವರ ವ್ಯಕ್ತಿತ್ವವನ್ನು ಕೀಳಾಗಿ ಬಿಂಬಿಸುವಂತೆ ಮಾಡಿದ್ದಾರೆ. ಒಬ್ಬ ಅಧಿಕಾರಿಗೆ ಕರ್ತವ್ಯ ಮುಖ್ಯವೇ ಹೊರತು ಜಾತಿ ಮುಖ್ಯವಲ್ಲ ಎಂಬ ಅರಿವಿಲ್ಲವೆ,ದಯಾನಂದ್ ಅವರ ಜಾತಿಯನ್ನು ಒತ್ತಿ ಹೇಳುವ ಮೂಲಕ ಪ್ರತಾಪ್‌ ಸಿಂಹ ಅವರನ್ನೂ ಜಾತಿಯಿಂದ ಅಳೆದಿರುವುದು ಅಕ್ಷಮ್ಯ ಎಂದಿದ್ದಾರೆ.

ಸಿದ್ದರಾಮಯ್ಯ ಅವರನ್ನ ಬೀಗರೂಟಕ್ಕೆ ಹೋಗುತ್ತಾರೆ, ಮೊಮ್ಮಗನನ್ನ ಕರೆದುಕೊಂಡು ಪೋಟೋಗ್ರಾಫ್‌ ತೆಗೆದುಕೊಳ್ಳೊಕೆ ಹೋಗುತ್ತಾರೆ ಎಂಬುದಾಗಿ ಟೀಕಿಸುವ ಪ್ರತಾಪ್ ಸಿಂಹ ತಮ್ಮ ಪತ್ನಿ, ಮಗಳನ್ನ ಪ್ರಧಾನಿ ಮೋದಿ ಅವರ ಬಳಿ ಕರೆದೊಯ್ದು ಫೋಟೋ ಕ್ಲಿಕ್ಕಿಸಿಕೊಳ್ಳಲಿಲ್ಲವೇ ಎಂದು‌ ಸುಬ್ರಹ್ಮಣ್ಯ ಪ್ರಶ್ನಿಸಿದ್ದಾರೆ.