ಕಮಲ್ ಹಸನ್ ವಿರುದ್ಧ ಸಿಡಿದೆದ್ದ ಕ ರ ವೇ ಪ್ರವೀಣ್ ಶೆಟ್ಟಿ ಬಣ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಕಮಲ್ ಹಸನ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದವರು ಸಿಡಿದೆದ್ದಿದ್ದಾರೆ.

ಕಮಲ್ ಹಸನ್ ಅವರ ಯಾವುದೇ ಚಲನಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕ ರ ವೇ ಪ್ರವೀಣ್ ಶೆಟ್ಟಿ ಬಣದ ಪದಾಧಿಕಾರಿಗಳು ಕೊಳ್ಳೇಗಾಲ ಉಪವಿಭಾಗಾಧಿಕಾರಿ ಮಹೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕರವೇ ತಾಲೂಕು ಘಟಕದ ಅಧ್ಯಕ್ಷ ಜಗದೀಶ್ ಶಾಸ್ತ್ರಿ ನೇತೃತ್ವದಲ್ಲಿ ಪಟ್ಟಣದಲ್ಲಿರುವ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ ಶಾಸ್ತ್ರಿ, ಕಮಲ್ ಹಸನ್ ಕನ್ನಡ ತಮಿಳಿನಿಂದ ಬಂದಿದೆ ಎಂದು ಹೇಳುವ ಮೂಲಕ ಕನ್ನಡ ಭಾಷೆಗೆ ಅಪಮಾನ ಮಾಡಿದ್ದಾರೆ. ಅವರು ಕನ್ನಡ ಚಿತ್ರಗಳಲ್ಲಿ ನಟಿಸಿ ಇಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರೂ ಸಹ ಇಂತಹ ಹೇಳಿಕೆ ನೀಡಿ ಕನ್ನಡಿಗರ ಭಾವನೆಗಳಿಗೆ ದಕ್ಕೆಯುಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಭಾಷೆಗೆ ಅಪಮಾನ ಮಾಡಿ ಕನ್ನಡಿಗರ ಭಾವನೆಗಳಿಗೆ ದಕ್ಕೆಯುಂಟು ಮಾಡಿರುವ ಈ ವ್ಯಕ್ತಿಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶ ನೀಡಬಾರದು.ಒಂದು ವೇಳೆ ಅವರ ಚಲನಚಿತ್ರಗಳನ್ನು ಬಿಡುಗಡೆ ಮಾಡಲು ಚಿತ್ರಮಂದಿರಗಳು ಮುಂದಾದರೆ, ಕರ್ನಾಟಕ ರಕ್ಷಣಾವೇದಿಕೆ ತೀವ್ರ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷರಾದ ಯೂನುಸ್ ಪಾಷ, ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಮಹೇಶ್, ಹೊಸ ಹಂಪಾಪುರ ಗ್ರಾಮ ಘಟಕ ರೇವಣ್ಣನಾಯಕ, ಉಪಾಧ್ಯಕ್ಷ ಶ್ರೀಧರ್, ಜಿಲ್ಲಾ ಉಪಾಧ್ಯಕ್ಷ ಸಮೀಷರೀಪ್, ಜಿಲ್ಲಾ ಸಲಹೆಗಾರ ಅಣಗಳ್ಳಿ ಬಸವರಾಜು, ಪದಾಧಿಕಾರಿಗಳಾದ ಸುರೇಶ್ ಸಿಂಗನಲ್ಲೂರು, ರೇಚಣ್ಣ, ಮಹಮ್ಮದ್ ಅಬ್ಜಲ್(ಅಜ್ಜು) ಮತ್ತಿತರರು ಹಾಜರಿದ್ದರು.