ದೀಪಾವಳಿ ದಿವಾಳಿ ಯಾಗದಿರಲಿ ಕನ್ನಡ ಪದಬಳಕೆ ಸರಿಯಿರಲಿ:ಅಭಿಯಾನ

Spread the love

ಮೈಸೂರು: ಕರ್ನಾಟಕ ಹಿತರಕ್ಷಣಾ ವೇದಿಕೆ
ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಅಂಗವಾಗಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಯಿತು.

ಡಿ ದೇವರಾಜ ಅರಸು ರಸ್ತೆ, ವಿನೋಬ ರಸ್ತೆ, ಶಿವರಾಂಪೇಟೆ ಸುತ್ತಮುತ್ತಲ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಗುಲಾಬಿ ಹೂವನ್ನು ನೀಡಿ ಕನ್ನಡ ಪದಗಳನ್ನು ಸರಿಯಾದ ರೀತಿಯಲ್ಲಿ ಬಳಸುವಂತೆ ತಿಳಿ ಹೇಳಲಾಯಿತು.

ಇತ್ತೀಚೆಗೆ ಸ್ಥಳೀಯ ಹಬ್ಬಗಳ ಹೆಸರನ್ನು ಅಪಭ್ರಂಶ ಗೊಳಿಸುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ. ಇತ್ತೀಚಿನ ದಿನಗಳಲ್ಲಿ ದೀಪಾವಳಿಯನ್ನು ದಿವಾಳಿ ಎಂದು ಶುಭ ಕೋರುವುದು ಹಾಗೆಯೇ ದಸರಾವನ್ನು ದುಸ್ಸೆರಾ ಎಂದು ತಪ್ಪಾಗಿ ಶುಭಕೋರುತ್ತಾ,
ಅನ್ಯ ಭಾಷೆ ಶೈಲಿಯಲ್ಲಿ ಪದಬಳಕೆ ಮಾಡಿ ಶುಭ ಕೋರುವುದು ಖಂಡನೀಯ, ಅದರ ಅರ್ಥವೇ ಬೇರೆ ಇರುತ್ತದೆ.

ಹಾಗಾಗಿ ಕರ್ನಾಟಕ ಹಿತ ರಕ್ಷಣಾ ವೇದಿಕೆ ವತಿಯಿಂದ ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಗುಲಾಬಿ ನೀಡಿ ಪದಬಳಕೆ ಸರಿಯಾಗಿ ಉಚ್ಛರಿಸುವಂತೆ ಮನವಿ ಮಾಡಲಾಯಿತು.

ಕೆಲವು ಅಂಗಡಿ ಮುಂಗಟ್ಟುಗಳಲ್ಲಿ ದೀಪಾವಳಿಯನ್ನು ದಿವಾಳಿಯೆಂದು ಬರೆದು ಶುಭಕೋರುತ್ತಿರುವದನ್ನು ಖಂಡಿಸಿ ಅವರಿಗೆ ತಿಳಿಹೇಳಿ ಕನ್ನಡವನ್ನು ಸರಿಯಾಗಿ ಪ್ರಯೋಗಿಸಿ ಗೌರವಿಸಿ ಎಂದು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಕರ್ನಾಟಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್ ದೀಪಾವಳಿ ದಿವಾಳಿಯಾಗದಿರಲಿ ಎಂದು ಹೇಳಿದರು.

ಹಬ್ಬದ ದಿನಗಳು ಹತ್ತಿರ ಬರುತ್ತಿದ್ದಂತೆ ಗ್ರಾಹಕರಿಗೆ ಶುಭಾಶಯ ತಿಳಿಸಲು ಹಲವಾರು ಉದ್ದಿಮೆಗಳು ಕನ್ನಡಿಗರಿಗೆ ಉತ್ತರ ಭಾರತದ ಭಾಷೆಯಲ್ಲೇ ದಿವಾಳಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತವೆ.

ಬ್ಯಾಂಕ್‍ಗಳು ಅದರಲ್ಲೂ ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದ ಬ್ಯಾಂಕ್‍ಗಳು ದಿವಾಳಿ ಹಬ್ಬದ ಶುಭಾಶಯಗಳು ಎಂದು ಗ್ರಾಹಕರಿಗೆ ತಿಳಿಸುತ್ತಿರುವುದನ್ನು ನೋಡಿದರೆ ಕನ್ನಡದ ಬಗ್ಗೆ ಇವರಿಗೆಷ್ಟು ಅಭಿಮಾನವಿದೆ ಮಾಹಿತಿಯಿದೆ ಎಂಬುದರ ಬಗ್ಗೆ ಸಂದೇಹ ವ್ಯಕ್ತವಾಗುತ್ತದೆ ಎಂದು ಹೇಳಿದರು.

ಕನ್ನಡದಲ್ಲಿ ದಿವಾಳಿ ಎಂದರೆ ಎಲ್ಲವನ್ನೂ ಕಳೆದುಕೊಳ್ಳುವುದು ಎಂದು ಅರ್ಥ.ದಿವಾಳಿ ಹಬ್ಬ ಎಂದರೆ ಕನ್ನಡಿಗರು ಏನೆಂದು ತಿಳಿದುಕೊಳ್ಳಬೇಕು? ಅದರಲ್ಲೂ ಕನ್ನಡಿಗರು ಹಣ ಇಟ್ಟಿರುವ ಬ್ಯಾಂಕುಗಳೇ ಹೀಗೆ ಹಾರೈಸಿದರೆ ಕನ್ನಡಿಗರಿಗೆ ಪರಿಚಯವಿರುವ ಹೆಸರುಗಳನ್ನೇ ಬಳಸಲು ತೊಂದರೆ ಏನು ?
ಈ ಬಗ್ಗೆ ಕನ್ನಡ ಪ್ರಾಧಿಕಾರವು ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಅಭಿಯಾನದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್,ಮೂಡ ಮಾಜಿ ಸದಸ್ಯರಾದ ನವೀನ್ ಕುಮಾರ್, ಜಿ ರಾಘವೇಂದ್ರ, ಎಸ್ ಎನ್ ರಾಜೇಶ್, ರವಿಚಂದ್ರ, ನಂಜುಂಡಸ್ವಾಮಿ, ಸಚಿನ್ ನಾಯಕ್, ದಿನೇಶ್, ರಾಕೇಶ್, ಕಾಟೂರು ಶ್ರೀನಿವಾಸ್, ಕಣ್ಣಣ್ಣ ಪಾಲ್ಗೊಂಡಿದ್ದರು.