ಮೈಸೂರು: ನಟಸಾರ್ವಭೌಮ ಡಾಕ್ಟರ್ ರಾಜ್ ಕುಮಾರ್ ಅವರು ಚಿತ್ರರಂಗದ ಮೇರು ಪರ್ವತ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಬಣ್ಣಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಹಾಗೂ ಉತ್ತಿಷ್ಠ ಭಾರತ ಪ್ರತಿಷ್ಠಾನ,ಜೆ.ಪಿ.ನಗರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮೈಸೂರಿನ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ವರನಟ ಡಾ.ರಾಜ್ ಕುಮಾರ್ ನೆನಪಿನೋತ್ಸವ, ಗೀತಗಾಯನ ಕಾರ್ಯಕ್ರಮ,ಡಾ.ರಾಜ್ ಕುಮಾರ್ ಸದ್ಭಾವನಾ ಪ್ರಶಸ್ತಿ -2025 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ರಾಜ್ ಕಾಲಘಟ್ಟದಲ್ಲಿ ಸಿನಿಮಾ ಮಾಧ್ಯಮ ಮಾತ್ರ ಹೆಚ್ಚು ಜನಪ್ರಿಯವಾಗಿತ್ತು.ಆದರೆ ಇಂದು ಮಾಧ್ಯಮ ವಿವಿಧ ಆಯಾಮಗಳಲ್ಲಿ ಬೆಳೆದು ನಿಂತಿದೆ.ಸಿನಿಮಾ ಮಾಧ್ಯಮ ಮನುಷ್ಯನ ಬದುಕಿಗೆ ಅತ್ಯಂತ ಹತ್ತಿರವಾಗಿತ್ತು.ರಾಜ್ ಕುಮಾರ್ ರವರ ಚಿತ್ರಗಳನ್ನು ಜಾತಿಭೇದ,ಧರ್ಮಾಧಾರಿತವಾಗಿ ಯಾರು ನೋಡುತ್ತಿರಲಿಲ್ಲ.ಬದಲಾಗಿ ಕುಟುಂಬ ಸಮೇತ ಎಲ್ಲರೂ ಸೇರಿ ಖುಷಿಯಿಂದ ನೋಡುತ್ತಿದ್ದರು.ಅವರ ಸಿನಿಮಾಗಳು ಇಡೀ ರಾಜ್ಯದ ಎಲ್ಲಾ ಕುಟುಂಬಗಳ ಮೇಲೆ ಪ್ರಭಾವ ಬೀರುತ್ತಿದ್ದವು, ಸಿನಿಮಾಗಳ ಮೂಲಕ ಎಲ್ಲರಿಗೂ ರಾಜ್ ಆದರ್ಶವಾಗಿಬಿಟ್ಟಿದ್ದರು ಎಂದು ಸೋಮಶೇಖರ್ ಸ್ಮರಿಸಿದರು.
ಯೂನಿವರ್ಸಲ್ ಅಕಾಡೆಮಿಯ ಸಂಸ್ಥಾಪಕರಾದ ಪ್ರಕಾಶ್ ಎಸ್ ಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾ ಕ ಸಾ ಪ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.
ಸುಯೋಗ್ ಆಸ್ಪತ್ರೆಯ ಅಧ್ಯಕ್ಷರಾದ ಡಾ.ಎಸ್.ಪಿ.ಯೋಗಣ್ಣ ಡಾ.ರಾಜ್ ಕುಮಾರ್ ಕುರಿತು ಮಾತನಾಡಿದರು.
ಹಿರಿಯ ಯೋಗಾಚಾರ್ಯರಾದ ಶ್ರೀ ಎಸ್.ವಿ.ವೆಂಕಟೇಶಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಾಹಿತ್ಯ ಸಾಧನೆಗಾಗಿ ಡಾ.ಕೆ.ಲೀಲಾಪ್ರಕಾಶ್,ಯೋಗ ಸಾಧನೆಗಾಗಿ ದೇವರಾಜ್,ಸಮಾಜಸೇವೆಗಾಗಿ ಎನ್.ಶ್ರೀಧರ್ ದೀಕ್ಷಿತ್, ವೈದ್ಯಕೀಯ ಸೇವೆಗೆ ಎಸ್.ಇ.ಗಿರೀಶ್ ,ಕಾವ್ಯ ಸಾಧನೆಗೆ ನಾಗಮ್ಮ, ಆಡಳಿತ ಸೇವೆಗೆ ಕೃಷ್ಣಮೂರ್ತಿ ಅವರುಗಳಿಗೆ ಡಾ.ರಾಜ್ ಕುಮಾರ್ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಎಂ.ವಿ.ನಾಗೇಂದ್ರ ಬಾಬು, ಸಂಚಾಲಕರಾದ ಅರುಣ್ ಹೇಮಂತ್, ಉಪಾಧ್ಯಕ್ಷ ಎನ್.ಅನಂತ್ ಮತ್ತಿತರರು ಉಪಸ್ಥಿತರಿದ್ದರು.