ಕನ್ನಡ ನಾಡಿನ ಹೆಸರನ್ನು ಅವಿಸ್ಮರಣೀಯ ಮಾಡಿದ ರಾಣಿ ಚೆನ್ನಮ್ಮ:ಡಾ. ಪುಷ್ಪಾ

Spread the love

ಮೈಸೂರು: ರಾಣಿ ಚೆನ್ನಮ್ಮ ಅವರು ಕನ್ನಡ ನಾಡಿನ ಹೆಸರನ್ನು ಭೂಗೋಳದಲ್ಲಿ ಅವಿಸ್ಮರಣೀಯ ಮಾಡಿದ ವೀರ ಮಹಿಳೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ನಾಟಕ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಚೆನ್ನಮ್ಮ ಹೆಸರು ಕೇಳಿದಾಕ್ಷಣ ಎಲ್ಲರಲ್ಲೂ ಮೈ ರೋಮಾಂಚನಗೊಳ್ಳುತ್ತದೆ ಅಂತಹ ಶಕ್ತಿ ಇದೆ ಆ ಹೆಸರಲ್ಲಿ ಎಂದು ಹೇಳಿದರು.

ಚೆನ್ನಮ್ಮ ಅವರು ಬ್ರಿಟಿಷರಿಗೆ ನಿಮಗೇಕೆ ಕೊಡಬೇಕು ಕಪ್ಪ ಎಂಬ ಸವಾಲಿನ ಮಾತನ್ನು ನೆನಪಿಸುತ್ತಾ ನಮ್ಮ ನಾಡಿನ ಮಹಿಳೆಯರು ಹಾಗೂ ಪುರುಷರಲ್ಲಿ ದೇಶ ಭಕ್ತಿಯನ್ನು ಹಚ್ಚಿ, 128 ವರ್ಷಗಳ ಮುಂಚೆಯೇ ಸ್ವಾತಂತ್ರ್ಯದ ಕಿಚ್ಚನ್ನು ಬೆಳಗಿಸಿದರು. ಯಾವುದೇ ಒಂದು ಕೆಲಸ ಅಥವಾ ಸವಾಲನ್ನು ತೆಗೆದುಕೊಳ್ಳುವಾಗ ಹೆಣ್ಣು ಮಕ್ಕಳಿಗೆ ಸ್ಫೂರ್ತಿ ಕೊಡುವಂತಹ ಶಕ್ತಿ ಈಕೆಯದು ಎಂದು ಪುಷ್ಪ ಅಮರ್‌ನಾಥ್ ತಿಳಿಸಿದರು.

ವಿಧಾನ ಪರಿಷತ್ತಿನ ಸದಸ್ಯ ಸಿ.ಎನ್ ಮಂಜೇಗೌಡ ಮಾತನಾಡಿ, ಪ್ರಸ್ತುತ ಕಾಲಮಾನದಲ್ಲಿ ಇತಿಹಾಸವನ್ನು ತಿಳಿದುಕೊಳ್ಳವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

ಏಕೆಂದರೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಬಸವಣ್ಣ ಇವರೆಲ್ಲರೂ ತಮ್ಮ ಪ್ರಾಣವನ್ನು ದೇಶದ ಏಳಿಗೆಗೆ, ಸ್ವಾತಂತ್ರ್ಯಕ್ಕಾಗಿ ಹಾಗೂ ನಾಡಿನ ರಕ್ಷಣೆಗಾಗಿ ಬಲಿದಾನ ಮಾಡಿದಂತಹ ಮಹಾನ್ ವ್ಯಕ್ತಿಗಳು. ಇಂತಹ ಮಹಾನ್ ದಾರ್ಶನಿಕರನ್ನು ನಾವು ಸ್ಮರಿಸಿಕೊಳ್ಳುವ ಮೂಲಕ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ಹಿರಿಯ ಸಾಹಿತಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ಅವರು ಮಾತನಾಡಿ, ಈ ನಾಡು ಅನ್ಯರ ಪಾಲಾಗದೆ ನಮಗೇ ಉಳಿಯಬೇಕೆಂಬ ದಿಟ್ಟ ಕನಸನ್ನು ಇಟ್ಟುಕೊಂಡು ಹೋರಾಟ ನಡೆಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಈಕೆಯ ಬದುಕು, ಹೋರಾಟ ಅನನ್ಯ ಎಂದು ಹೇಳಿದರು.

ದಿವ್ಯ ಸಾನಿಧ್ಯವನ್ನು ಬಸವ ಜ್ಞಾನ ಮಂದಿರದ ಪೀಠಾಧ್ಯಕ್ಷರಾದ ಡಾ.ಮಾತೆ ಬಸವಾಂಜಲಿ ದೇವಿ ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ. ಎಂ. ಡಿ ಸುದರ್ಶನ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಬಿ. ಎಸ್ ಸೋಮಶೇಖರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.