ಬೆಂಗಳೂರು: ಗುಬ್ಬಿವಾಣಿ ಟ್ರಸ್ಟ್ ಮಹಿಳಾ ನಿರ್ದೇಶಕಿಯರಿಗಾಗಿ ಆಯೋಜಿಸಿದ ಕನ್ನಡ ಕಿರುಚಿತ್ರಗಳ ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿದೆ ಎಂದು ಅವಳ ಹೆಜ್ಜೆ ಚಿತ್ರೋತ್ಸವ ನಿರ್ದೇಶಕಿ ಶಾಂತಲಾ ದಾಮ್ಲೆ ತಿಳಿಸಿದರು.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾಲವಿಕ ಗುಬ್ಬಿವಾಣಿ,ಚಿತ್ರ ಸಮಿತಿ ಮುಖ್ಯಸ್ಥೆ ಉಷಾ ಸಂಪತ್ಕುಮಾರ್ ಹಾಗು ವಿನ್ಯಾಸ ಮತ್ತು ಇಂಟರ್ನ್ ಶಿಪ್ ಸಂಯೋಜಕಿ ನವ್ಯಶ್ರೀ ಅವರುಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಶಾಂತಲಾ ದಾಮ್ಲೆ ಮಾಹಿತಿ ನೀಡಿದರು.

ಅಮೇರಿಕಾದ ಕನ್ನಡತಿಯೊಬ್ಬರು,14 ವರ್ಷದ ಕಿರಿಯ ಕಲಾವಿದೆಯೂ ಸೇರಿದಂತೆ, ರಾಜ್ಯಾದ್ಯಂತ ವಿವಿಧ ಹಿನ್ನೆಲೆಯ ಮಹಿಳೆಯರು ನಿರ್ದೇಶಿಸಿದ ಸುಮಾರು 60 ಕಿರುಚಿತ್ರಗಳು ಸಲ್ಲಿಕೆಯಾಗಿವೆ ಎಂದು ಹೇಳಿದರು.
ಆಯ್ಕೆ ಅತ್ಯಂತ ಸ್ಪರ್ಧಾತ್ಮಕವಾಗಿದ್ದು, ಸುನಯನ ಸುರೇಶ, ಮಧು ದೈತೋಟ, ಸಂಜೋತಾ ಭಂಡಾರಿ, ಶ್ವೇತ್ ಪ್ರಿಯಾ ನಾಯಕ್, ಗೌರಿ ನೀಲಾವರ್, ಅಖಿಲಾ ವಿದ್ಯಾಸಂದ್ರ, ಪೂಜಾ ಸುಧೀರ್, ಪೂರ್ಣಿಮಾ ಮಾಳಗಿಮನಿ ಇವರನ್ನು ಒಳಗೊಂಡ ಪ್ರತಿಷ್ಠಿತ ತೀರ್ಪುಗಾರರ ತಂಡ ಸೂಕ್ಷ್ಮವಾಗಿ ಪರಿಗಣಿಸಿ ಆಯ್ದ 9 ಚಿತ್ರಗಳನ್ನು ಆಯ್ಕೆ ಮಾಡಿದ್ದು,ಈ ಕಿರುಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಆಯ್ದ ಚಿತ್ರಗಳು: ಕೇಕ್ ವಾಕ್ , ಪುಷ್ಪ, ಸೊಲೋ ಟ್ರಾವೆಲ್ಲರ್, ಹೌ ಆರ್ ಯು?, ಆನ್ ಲೈನ್, ಉಭಯ, ದಿ ಲಾಸ್ಟ್ ಹ್ಯಾಪಿ ಕಸ್ಟಮರ್, ಅನ್‌ಹರ್ಡ್ ಎಕೋಸ್, ನೀರೆಲ್ಲವೂ ತೀರ್ಥ.
ಚಿತ್ರೋತ್ಸವದ ಮುಖ್ಯ ಅತಿಥಿಯಾಗಿ ಖ್ಯಾತ ನಿರ್ದೇಶಕಿ ಡಿ. ಸುಮನ ಕಿತ್ತೂರು ಅವರ ಸಮಕ್ಷಮದಲ್ಲಿ ವಿಜೇತರ ಘೋಷಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಹೆಳಿದರು.
ಅತ್ಯುತ್ತಮ ಕಿರುಚಿತ್ರಕ್ಕೆ ಅವಳ ಹೆಜ್ಜೆ ಪ್ರಶಸ್ತಿ ನಗದು 1,00,000 ರೂ ಮತ್ತು ಕೆಲವು ಚಿತ್ರಗಳಿಗೆ ಮೆಚ್ಚುಗೆಯ ಬಹುಮಾನ 10,000 ರೂ ನೀಡಲಾಗುತ್ತದೆ ಎಂದು ಶಾಂತಲಾ ದಾಮ್ಲೆ ಮತ್ತು ಮಾಲವಿಕ ಗುಬ್ಬಿವಾಣಿ,ಉಷಾ ಸಂಪತ್ ಕುಮಾರ್ ವಿವರಿಸಿದರು.
ಇದು ಕೇವಲ ಕಿರುಚಿತ್ರ ಪ್ರದರ್ಶನವಲ್ಲ, ಮಹಿಳೆಯರ ಅನುಭವ, ದೃಷ್ಟಿಕೋನಗಳಿಗೆ ವೇದಿಕೆ ನೀಡುವ, ಲಿಂಗ ಸಮಾನತೆಯ ಚಿಂತನೆಗೆ ಉತ್ತೇಜನ ನೀಡುವ ಒಂದು ಚಳವಳಿ ಎಂದು ಸ್ಥಾಪಕ ಟ್ರಸ್ಟಿ ಮಾಲವಿಕ ಗುಬ್ಬಿವಾಣಿ ತಿಳಿಸಿದರು.
ಕ್ಯಾಮೆರಾ ಹಿಂದೆ ಮಹಿಳೆ ಇಲ್ಲದಿದ್ದರೆ, ಪರದೆಯ ಮೇಲಿನ ಮಹಿಳಾ ಪಾತ್ರಗಳು ಕೇವಲ ಗ್ಲಾಮರ್ ಗೆ ಸೀಮಿತವಾಗುವ ಅಪಾಯವಿದೆ. ಮಹಿಳೆಯರ ದೃಷ್ಟಿಕೋನ ಮತ್ತು ಲಿಂಗ ಸಮಾನತೆಯನ್ನು ಪ್ರಸ್ತುತಪಡಿಸಲು ದೃಶ್ಯಮಾಧ್ಯಮ ಪರಿಣಾಮಕಾರಿಯಾಗಿರುವುದರಿಂದ ಮಹಿಳಾ ನಿರ್ದೇಶಕಿಯರನ್ನು ಪ್ರೋತ್ಸಾಹಿಸಲು ಈ ಕಿರುಚಿತ್ರೋತ್ಸವವನ್ನು ಆಯೋಜಿಸಿದ್ದೇೆವೆ ಎಂದು ಚಿತ್ರೋತ್ಸವ ನಿರ್ದೇಶಕಿ ಶಾಂತಲಾ ದಾಮ್ಲೆ ಹೇಳಿದರು.
ಅವಳ ಹೆಜ್ಜೆ ಕಿರುಚಿತ್ರೋತ್ಸವ 2025
ಜೂನ್ 14 ರಂದು ಶನಿವಾರ ಬೆಳಿಗ್ಗೆ 10.30ರಿಂದ ಸಂಜೆ 7 ಕ್ಕೆ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ (BIC)ನಲ್ಲಿ ನಡೆಯಲಿದೆ.