ರಾಜ್ಯ ಜಾನಪದ ಸಮ್ಮೇಳನ ಸರ್ವಾಧ್ಯಕ್ಷರಾಗಿ ಸಿ ಸೋಮಶೇಖರ್ ಆಯ್ಕೆ

ಬೆಂಗಳೂರು: ಕನ್ನಡ ಜಾನಪದ ಪರಿಷತ್ ಗೋವಿಂದರಾಜ ವಿಧಾನಸಭಾ ಕ್ಷೇತ್ರದ ವತಿಯಿಂದ ಜೂನ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ರಾಜ್ಯ ಪ್ರಥಮ ಜಾನಪದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಈ ಸಮ್ಮೇಳನ ಸರ್ವಾಧ್ಯಕ್ಷರಾಗಿ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ ಸಿ ಸೋಮಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.

ಬೆಂಗಳೂರಿನ ಬಸವೇಶ್ವರನಗರದ ಡಾ ಸಿ ಸೋಮಶೇಖರ್ ಅವರ ಗೃಹ ಕಚೇರಿಯಲ್ಲಿ ಅವರನ್ನು ಭೇಟಿಯಾಗಿ ಚರ್ಚಿಸಿ ಅಭಿನಂದಿಸಲಾಯಿತು.

ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ 31 ಸಾಧಕರಿಗೆ ರಾಜ್ಯ ಜಾನಪದ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ನೀಡಲಾಗುವುದು, ಮೂಲ ಕಲಾವಿದರಿಗೆ ಇದು ವೇದಿಕೆಯಾಗಲಿದೆ ಎಂದು ತಿಳಿಸಿದರು.

ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾ ನರಸಿಂಹಮೂರ್ತಿ ಮಾತನಾಡಿ ಗೋವಿಂದರಾಜ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ಜನಪದ ಕಲಾವಿದರು, ಸಾಹಿತಿಗಳು, ವಿದ್ವಾಂಸರು, ಸಂಘಟಕರು ಎಲ್ಲರನ್ನೂ ಒಳಗೊಂಡ ವಿಶಿಷ್ಟ ಸಮ್ಮೇಳನವನ್ನು ಶಾಸಕರಾದ ಪ್ರಿಯಕೃಷ್ಣ ಅವರ ನೇತೃತ್ವದಲ್ಲಿ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಡಾ ಅಂಬಿಕಾ, ಸವೀತಾ, ಅಶ್ವಥ್ ನಾರಾಯಣ್, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ರವಿಕಾಂತ್ ಉಪಸ್ಥಿತರಿದ್ದರು.