ದಶಮಾನೋತ್ಸವ ಸಂಭ್ರಮದಲ್ಲಿ ಕನ್ನಡ ಜಾನಪದ ಪರಿಷತ್

Spread the love

ಬೆಂಗಳೂರು,ಮಾ.6: ರಾಜ್ಯ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ವಿಭಿನ್ನವಾಗಿ ತೊಡಗಿಸಿಕೊಂಡಿರುವ ಕನ್ನಡ ಜಾನಪದ ಪರಿಷತ್ ವೈಶಿಷ್ಟ್ಯಪೂರ್ಣವಾಗಿ ದಶಮಾನೋತ್ಸವ ಆಚರಿಸಲು ಮುಂದಾಗಿದೆ

ಗಮನಿಸಬೇಕಾದ ಸಂಗತಿ ಎಂದರೆ ಮಾರ್ಚ್ ೬, ೨೦೧೫ರಂದು ಸ್ಥಾಪನೆಯಾದ ಕನ್ನಡ ಜಾನಪದ ಪರಿಷತ್ ಇಂದಿಗೆ ೯ ವರ್ಷಗಳನ್ನು ಪೂರೈಸಿ ಹತ್ತನೇ ವರ್ಷಕ್ಕೆ ಕಾಲಿಡುತ್ತಾ ಭಿನ್ನ ಭಿನ್ನವಾಗಿ ದಶಮಾನೋತ್ಸವ ಆಚರಿಸಿಕೊಳ್ಳುವ ತುದಿಗಾಲಲ್ಲಿ ನಿಂತಿದೆ.

ಈ ಪರಿಷತ್ ಅನ್ನು ಸ್ಥಾಪಿಸುವ ಮೂಲಕ ರಾಜ್ಯ, ದೇಶದ ಹಲವು ಪ್ರದೇಶಗಳಲ್ಲಿ ಜಾನಪದ ಪ್ರಕಾರಗಳು ಸೇರಿ ಕಲಾವಿದರನ್ನು ಮುನ್ನೆಲೆಗೆ ತರಲು ಡಾ.ಎಸ್.ಬಾಲಾಜಿ ವಿಶೇಷವಾಗಿ ಶ್ರಮಿಸುತ್ತಿದ್ದಾರೆ.

ಕನ್ನಡ ಜಾನಪದ ಪರಿಷತ್ ದಶಮಾನೋತ್ಸವದ ಅಂಗವಾಗಿ ರಾಜ್ಯದಲ್ಲಿ ೧೦ ಜಾನಪದ ಸಮ್ಮೇಳನಗಳನ್ನು ಏರ್ಪಡಿಸಲು ತೀರ್ಮಾನಿಸಲಾಗಿದೆ.

೩೧ ಜಿಲ್ಲೆಗಳಲ್ಲೂ ಸಹ ದಶಮಾನೋತ್ಸವ ಅಂಗವಾಗಿ ಕನ್ನಡ ಜಾನಪದ ಪರಿಷತ್ ಸಂಭ್ರಮ ಆಚರಣೆಗಳನ್ನು ಕಡ್ಡಾಯವಾಗಿ ಆಯೋಜಿಸಲಿದೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ೧೦ ಜಾನಪದ ಕಲಾವಿದರಿಗೆ ದಶಮಾನೋತ್ಸವ ಪ್ರಶಸ್ತಿ ನೀಡಿ ಸತ್ಕರಿಸಲು ಪರಿಷತ್ ನಿರ್ಧರಿಸಿದೆ.

ಗ್ರಾಮೀಣ ಭಾಗದಲ್ಲಿ ಮಹಿಳಾ ಜಾನಪದ ಕಲಾವಿದರುಗಳನ್ನು ಗುರ್ತಿಸದ ವಾತಾವರಣ ನಿರ್ಮಾಣವಾಗಿದೆ.ಹಾಗಾಗಿ ಕನ್ನಡ ಜಾನಪದ ಪರಿಷತ್ ಇದೇ ವರ್ಷದಲ್ಲಿ ರಾಜ್ಯ ಮಟ್ಟದ ಮಹಿಳಾ ಜಾನಪದ ಸಮ್ಮೇಳನವನ್ನು ನಡೆಸಲು ಯೋಜನೆಯನ್ನು ರೂಪಿಸಿದೆ.

ಕನ್ನಡ ಜಾನಪದ ಪರಿಷತ್ ಸರ್ಕಾರದ ಯಾವುದೇ ಅನುದಾನವಿಲ್ಲದೆ ಹತ್ತು ಸಾವಿರಕ್ಕಿಂತ ಹೆಚ್ಚಿನ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಸಂಘಟಿಸಿರುವುದು ಪ್ರಶಂಸನೀಯ.

ರಾಜ್ಯದಲ್ಲಿ ಸುಮಾರು 17 ಸಮ್ಮೇಳನಗಳನ್ನು ರಾಜ್ಯಮಟ್ಟದಲ್ಲಿ, ರಾಜ್ಯ ಮಹಿಳಾ ಸಮ್ಮೇಳನ, ರಾಜ್ಯ ಗೊರವರ ಸಮ್ಮೇಳನ, ರಾಜ್ಯ ಜೋಗಿ ಸಮ್ಮೇಳನ, ಗಡಿನಾಡು ಜಾನಪದ ಸಮ್ಮೇಳನ,1 ವಿಭಾಗ ಮಟ್ಟದ ಸಮ್ಮೇಳನ, 24 ತಾಲೂಕು ಮಟ್ಟದ ಸಮ್ಮೇಳನಗಳು ಹಾಗೂ
ಜಲಜನಕದೋತ್ಸವ, ವಾಯು ಜನಪದೋತ್ಸವ, ಅಗ್ನಿ ಜನಪದೋತ್ಸವ, ಧಾರ್ಮಿಕ ಜಾನಪದ, ಭಾಷಾ ಜಾನಪದ, ಕಾರ್ಯಕ್ರಮಗಳನ್ನು ಅಕಾಡೆಮಿಕ್ ಅಗಿ ಸಂಘಟಿಸಿ ಸೈ ಎನಿಸಿಕೊಂಡಿದೆ‌

ಜಾನಪದ ಕಲಾವಿದರ ಸಮೀಕ್ಷೆ:
ಕನ್ನಡ ಜಾನಪದ ಪರಿಷತ್ ರಾಜ್ಯದ ಒಟ್ಟು ೧೫ ಜಿಲ್ಲೆಗಳಿಗೆ ಭೇಟಿ ನೀಡಿ ಜಾನಪದ ಕಲಾವಿದರನ್ನು ಗುರುತಿಸಿ ಅವರ ಸಮೀಕ್ಷೆ ಮಾಡಿದೆ. ಇನ್ನುಳಿದ ೧೬ ಜಿಲ್ಲೆಗಳಲ್ಲೂ ೨೦೨೭ರೊಳಗಾಗಿ ಸಂಚರಿಸಿ ಸಮೀಕ್ಷೆ ಪೂರ್ಣಗೊಳಿಸುವ ಯೋಜನೆ ಹಾಕಿಕೊಂಡಿದೆ.

ಜೊತೆಗೆ ಜಿಲ್ಲಾವಾರು ಜಾನಪದ ಕಲಾವಿದರ ಕುರಿತಾಗಿ ಮಾಹಿತಿ ಕೈಪಿಡಿ ತರುವ ಉದ್ದೇಶವನ್ನು ಹೊಂದಿದೆ. ದಶಮಾನೋತ್ಸವ ಸಂದರ್ಭದಲ್ಲಿ ರಾಜ್ಯದ ಹಲವು ಭಾಗಗಳಲ್ಲಿರುವ ಜಾನಪದ ಪ್ರದರ್ಶನ ಕಲೆಗಳನ್ನು ದಾಖಲೀಕರಣ ಮಾಡಲು ಮುಂದಾಗಿದ್ದೇವೆ ಎಂದು ಖುಷಿಯಿಂದ‌ ಹೇಳಿದ್ದಾರೆ ‌ಡಾ.ಜನಪದ ಎಸ್.ಬಾಲಾಜಿ.

ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳ ಪಠ್ಯಪುಸ್ತಕದಲ್ಲಿ ಜಾನಪದ ಗದ್ಯ ಪದ್ಯಗಳನ್ನು ಹೆಚ್ಚು ಅಳವಡಿಸಬೇಕು. ರಾಜ್ಯದ ಜಾನಪದ ಕಲಾವಿದರಿಗೆ ಮಾಸಾಶನವನ್ನು ಹೆಚ್ಚಳ ಮಾಡಿ ವಯೋಮಿತಿಯನ್ನು ೫೦ಕ್ಕೆ ಇಳಿಸಬೇಕು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರೂ ಭಾರತ ಸರ್ಕಾರದ
ಐಸಿಸಿಆರ್ ಸದಸ್ಯರಾದ ಡಾ.ಎಸ್.ಬಾಲಾಜಿ ಮನವಿ ಮಾಡಿದ್ದಾರೆ ‌