ಕಮಲ ಹಾಸನ್ ಕನ್ನಡಿಗರ ಕ್ಷಮೆಯಾಚನೆಗೆ ಮು.ಮ ಚಂದ್ರು ಆಗ್ರಹ

ಬೆಂಗಳೂರು: ಕನ್ನಡ ಭಾಷೆಯ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಕಮಲ ಹಾಸನ್ ಕೂಡಲೇ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.

ಒಂದು ಭಾಷೆಯ ಉಗಮದ ವಿಚಾರಗಳು ಅತ್ಯಂತ ಸೂಕ್ಷ್ಮವಾಗಿದೆ. ಯಾವುದೇ ಸಂಶೋಧನೆ, ಅಧ್ಯಯನಗಳು ಇಲ್ಲದೆ ಇಂತಹ ವಿಚಾರಗಳನ್ನು ಮಾತನಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕನ್ನಡದ ಸುಪ್ರಸಿದ್ಧ ಕಲಾವಿದ ಶಿವರಾಜ್ ಕುಮಾರ್ ಅವರ ಮುಂದೆಯೇ, ಅದೇ ವೇದಿಕೆಯಲ್ಲಿಯೇ ಕನ್ನಡ ಭಾಷೆಯ ಬಗ್ಗೆ ಈ ರೀತಿಯ ಹೇಳಿಕೆ ನೀಡಿರುವುದು ಕನ್ನಡಿಗರಿಗೆ ಮತ್ತಷ್ಟು ನೋವನ್ನುಂಟು ಮಾಡಿದೆ ಎಂದು ಚಂದ್ರು ತಿಳಿಸಿದ್ದಾರೆ.

ಈಗಾಗಲೇ ಕನ್ನಡ ಮತ್ತು ತಮಿಳು ಭಾಷೆಯ ನಡುವಿನ ಸಂಘರ್ಷಗಳನ್ನು ಸಾಕಷ್ಟು ಕಂಡಿರುವ ಸಂದರ್ಭದಲ್ಲಿ ಮತ್ತಷ್ಟು ತುಪ್ಪ ಸುರಿಯುವಂತಹ ಇವರ ಹೇಳಿಕೆ ತೀರ ಖಂಡನೀಯ. ಶಿವರಾಜ್ ಕುಮಾರ್ ಅವರು ಕೂಡಲೇ ಕಮಲ್ ರ ಹೇಳಿಕೆಯನ್ನು ಪ್ರತಿಭಟಿಸಬಹುದಿತ್ತು ಎಂದು ‌ಮುಖ್ಯಮಂತ್ರಿ‌ ಚಂದ್ರು ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡಪರ ಆಲೋಚಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಸರ್ಕಾರ ಕೂಡಲೇ ಕಮಲ್ ಹೇಳಿಕೆಯನ್ನು ಖಂಡಿಸಬೇಕು. ಇದ್ಯಾವುದೂ ಆಗದಿದ್ದ ಪಕ್ಷದಲ್ಲಿ ಅವರ ಹೇಳಿಕೆಯ ವಿರುದ್ಧದ ಕನ್ನಡಿಗರ ಕಿಚ್ಚಿಗೆ ನಾವು ಸಹ ಧ್ವನಿಗೂಡಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದರು.