ಕಲಬುರ್ಗಿ: 100 ವರ್ಷದ ಸಂಭ್ರಮಾಚರಣೆಯ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸುವ ಪಥಸಂಚಲನದಲ್ಲಿ 300 ಜನ ಮಾತ್ರ ಭಾಗವಹಿಸಬೇಕು ಎಂಬ ಪೊಲೀಸ್ ಇಲಾಖೆ ಆದೇಶಕ್ಕೆ ಹಿನ್ನಡೆಯಾಗಿದೆ.
ಈ ಮೊದಲು ಸರ್ಕಾರ 300 ಜನರಿಗೆ ಅವಕಾಶ ನೀಡಿತ್ತು,ಆದರೆ ಸಂಘದಲ್ಲಿ ಹೆಚ್ಚಿನ ಜನ ಇದ್ದಾರೆ, ಆದ್ದರಿಂದ ಹೆಚ್ಚು ಜನ ಭಾಗವಹಿಸಲು ಅವಕಾಶ ಮಾಡಿಕೊಡಬೇಕು, ಸಮಯದ ಮಿತಿಯನ್ನು ಹೆಚ್ಚಿಸಬೇಕು ಎಂದು ಸಂಘದ ಸದಸ್ಯರು ಕೋರ್ಟ್ಗೆ ಮನವಿ ಮಾಡಿದ್ದರು.
ಈ ಕುರಿತು ಕಲಬುರ್ಗಿ ನ್ಯಾಯಾಲಯದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ನೇತೃತ್ವದಲ್ಲಿ ಮಹತ್ವದ ತೀರ್ಪು ಪ್ರಕಟಗೊಂಡಿದೆ.
ಪಥ ಸಂಚನದಲ್ಲಿ 350ಜನ ಮಾತ್ರ ಭಾಗವಹಿಸಬಹುದಾಗಿದೆ. ತದನಂತರ ಸೂರ್ಯಾಸ್ತ ಸಮಯ 5.45ರೊಳಗೆ ಪರೇಡ್ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಷರತ್ತುಬದ್ಧ ಅನುಮತಿ ನೀಡಿದೆ.
ಕೋರ್ಟ್ ತೀರ್ಪಿನಂತೆ, 300 ಜನರಿಗೆ ಸರ್ಕಾರದಿಂದಲೇ ಈಗಾಗಲೇ ಪರವಾನಗಿ ನೀಡಲಾಗಿತ್ತು, ಅದಕ್ಕೆ ಹೆಚ್ಚುವರಿಯಾಗಿ ಇನ್ನೂ 50 ಜನರನ್ನು ಸೇರಿಸಲು ನ್ಯಾಯಾಲಯ ಅನುಮತಿ ನೀಡಿದೆ.
ಒಟ್ಟು 350 ಮಂದಿಗೆ ಪಥಸಂಚಲನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಪೊಲೀಸ್ ಇಲಾಖೆ ಸುರಕ್ಷತಾ ಕಾರಣದಿಂದ ಕೆಲವು ನಿಯಮಗಳನ್ನು ವಿಧಿಸಿದೆ. ಅವುಗಳ ಪ್ರಕಾರ 50 ಮಂದಿ ಬ್ಯಾಂಡ್ ಬಳಗದವರು ಸೇರಿಕೊಳ್ಳಬಹುದು. ಪಥಸಂಚಲನದ ಸಮಯ ಮಧ್ಯಾಹ್ನ 3.30 ರಿಂದ ಸಂಜೆ 5.45ರವರೆಗೆ ಮಾತ್ರ ಎಂದು ಆದೇಶಿಸಿದೆ.
ಕೋರ್ಟ್ ಆದೇಶದಂತೆ ಸಂಜೆ 5.45ರವರೆಗೆ ಮಾತ್ರ ಪಥಸಂಚಲನ ಅವಕಾಶ ದೊರೆತ ಕಾರಣ, ಅದಾದಮೇಲೆ ಪಥಸಂಚಲನ ನಿಲ್ಲಿಸಬೇಕು. ಯಾವುದೇ ಶಿಸ್ತಿನ ಉಲ್ಲಂಘನೆ ನಡೆದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ.
ಕೋರ್ಟ್ ಅನುಮತಿಗೆ ಜಿಲ್ಲಾಡಳಿತ ಕೂಡಾ ಒಪ್ಪಿಕೊಂಡಿದೆ, ಪಥಸಂಚಲನ ಮಾರ್ಗದಲ್ಲಿ ಹೆಚ್ಚಿನ ಭದ್ರತಾ ಪಡೆ ನಿಯೋಜನೆ ಮಾಡಲಾಗುತ್ತಿದ್ದು, ಜನಸಂಚಾರ ಪ್ರದೇಶಗಳಲ್ಲಿ ಟ್ರಾಫಿಕ್ ತಾತ್ಕಾಲಿಕವಾಗಿ ಮರುನಿರ್ದೇಶಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.
