ಮೈಸೂರು: ದಸರಾ ಮತ್ತು ನವರಾತ್ರಿ ಪ್ರಾರಂಭವಾದಾಗಿನಿಂದ ಮೈಸೂರಿನ ಅಗ್ರಹಾರದ ನವಗ್ರಹ ದೇವಸ್ಥಾನದಲ್ಲಿ ತಾಯಿ ಪಾರ್ವತಿಗೆ ವಿಶಿಷ್ಟ ಅಲಂಕಾರ ಮತ್ತು ವಿಶೇಷ ಪೂಜೆ ನೆರವೇರಿಸುತ್ತಾ ಬರಲಾಗಿದೆ.
ನಗರದ ಅಗ್ರಹಾರ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ ನವರಾತ್ರಿಯ ವಿಶೇಷ ಪೂಜಾಕಾರ್ಯಗಳು ಅದ್ದೂರಿಯಾಗಿ ನೆರವೇರುತ್ತಿದೆ.
ಶಿವಾರ್ಚಕರಾದ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ಪ್ರತಿದಿನ ತಾಯಿ ಪಾರ್ವತಿಗೆ ವಿಶೇಷ ಅಲಂಕಾರಗಳನ್ನು ಮಾಡುತ್ತಿದ್ದಾರೆ.
ನವರಾತ್ರಿ ಎಂಟನೇ ದಿನವಾದ ಸೋಮವಾರ ರಾತ್ರಿ ತಾಯಿ ಕಾಳಿಕಾ ದೇವಿ ಅಲಂಕಾರದಲ್ಲಿ ರುದ್ರರಮಣೀಯವಾಗಿ ಕಾಣುತ್ತಾಳೆ. ತಾಯಿಯನ್ನು ನೋಡಿದೊಡನೆ ಮೈ ನವಿರೇಳುತ್ತದೆ.ಅಷ್ಟು ವಿಶಿಷ್ಟವಾಗಿ ಅಲಂಕಾರ ಮಾಡಿದ್ದಾರೆ ಅಭಿನಂದನ್.
ದೇವಿಯು ರುಂಡಮಾಲಿನಿಯಾಗಿದ್ದಾಳೆ ಬಲಗೈನಲ್ಲಿ ರಕ್ಕಸನ ತಲೆ ಬುರುಡೆ ಹಿಡಿದು ಕೇಕೆ ಹಾಕಿ ನಗುತ್ತಿರುವಂತೆ ಭಾಸವಾಗುತ್ತದೆ.
ನವರಾತ್ರಿಯಲ್ಲಿ ದುಷ್ಟ ಶಕ್ತಿಯನ್ನು ಸಂಹಾರ ಮಾಡಲೆಂದೇ ಆದಿಶಕ್ತಿಯು ಒಂಬತ್ತು ಅವತಾರಗಳನ್ನು ಎತ್ತುತ್ತಾಳೆ.ಕಡೆಗೆ ರಕ್ಕಸನನ್ನು ಸಂಹರಿಸಿ ವಿಜೃಂಬಿಸುತ್ತಾಳೆ.ಈ ಕಾಳಿಮಾತೆ ಅಲಂಕಾರ ನೋಡಿದಾಕ್ಷಣ ನವರಾತ್ರಿಯ ಇಡೀ ಪುರಾಣ ನೆನಪಾಗುವಂತಿದೆ.
ಬೆಳ್ಳಿಯ ಕಿರೀಟ,ತ್ರಿಶೂಲ ಧಾರಿಯಾಗಿದ್ದಾಳೆ.ತಲೆಯಲ್ಲಿ ಜಟೆ ಇದೆ ವಿವಿಧ ಬಗೆಯ ಹೂಗಳು,ನಿಂಬೆಹಣ್ಣುಗಳ ಹಾರ, ತಲೆಬುರುಡೆಗಳುಳ್ಳ ಮಾಲೆ ಹಾಕಿಕೊಂಡು ನಾಲಿಗೆಯನ್ನು ಹೊರಚಾಚಿ ಉಗ್ರ ರೂಪತಾಳಿದ್ದಾಳೆ ಕಾಳಿ ಮಾತೆ.
ನೂರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು ಭಯಭಕ್ತಿಯಿಂದ ನಮಿಸಿ ಪೂಜಿಸಿ ಹೋಗುತ್ತಿದ್ದಾರೆ.