ಕನ್ನಡ ಎಂಬುದು ಬರಿ ಭಾಷೆಯಲ್ಲ, ಅದು ನಮ್ಮ ರಕ್ತ-ಜಗದೀಶ್ ಶಾಸ್ತ್ರೀ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲೂಕಿನ ಹೊಸ ಹಂಪಾಪುರ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಹಂಪಾಪುರ ಗ್ರಾಮ ಘಟಕದ ವತಿಯಿಂದ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಗ್ರಾಮದ ಕಲಿಯೂರು ಮುಳ್ಳೂರು ರಸ್ತೆಯಲ್ಲಿರುವ ಮೋದಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯೋತ್ಸವದಲ್ಲಿ ಧ್ವಜಾರೋಹಣವನ್ನು ಕರವೇ ತಾಲೂಕು ಅಧ್ಯಕ್ಷ ಜಗದೀಶ್ ಶಾಸ್ತ್ರೀ ಯವರು ಕರವೇ ಪದಾಧಿಕಾರಿಗಳೊಡನೆ ನೆರೆವೇರಿಸಿದರು.

ಬಳಿಕ ಕನ್ನಡಾಂಬೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಪೂಜೆ ಸಲ್ಲಿಸಿ ಸಿಹಿ ವಿತರಣೆ ಮಾಡಿ, ಅನ್ನ ಸಂತರ್ಪಣೆ ಮಾಡಿದರು.

ಈ ವೇಳೆ ಅಧ್ಯಕ್ಷ ಜಗದೀಶ್ ಶಾಸ್ತ್ರೀ ಮಾತನಾಡಿ, ಕನ್ನಡ ಎಂಬುದು ಬರಿ ಭಾಷೆಯಲ್ಲ, ಅದು ನಮ್ಮ ರಕ್ತ. ಇಂತಹ ಗಂಧದನಾಡು, ಸಾಂಸ್ಕೃತಿಕ ಕಲೆಗಳ ಬೀಡು, ಅಚ್ಚ ಹಸಿರಿನ ನಾಡು ನಮ್ಮ ಕರುನಾಡು. ಇಂತಹ ನಾಡಿನಲ್ಲಿ ಜನಿಸಿರುವುದು ನಮ್ಮ ಸೌಭಾಗ್ಯ. ನಮ್ಮ ನಾಡಿನ ಭಾಷೆ, ನೆಲ, ಜಲ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಕನ್ನಡ ನಾಡಿನ ಭಾಷೆ, ನೆಲ ರಕ್ಷಣೆ, ನೊಂದ ಜನರ ರಕ್ಷಣೆಗೆ ಬದ್ದವಾಗಿದೆ, ಕನ್ನಡದ ವಿಷಯದಲ್ಲಿ ಯಾವುದೇ ಸಮಸ್ಯೆ ಬಂದರೆ ನಮ್ಮ ಕರವೇ ಪಡೆ ಸದಾ ಹೋರಾಟಕ್ಕೆ ಸದಾ ಸಿದ್ದವಾಗಿರುತ್ತದೆ, ಹಾಗೆಯೇ ಕನ್ನಡ ರಾಜ್ಯೋತ್ಸವವನ್ನು ಪ್ರತಿ ಗ್ರಾಮಗಳಲ್ಲಿ ಎಲ್ಲರೂ ವಿಜೃಂಭಣೆಯಿಂದ ಆಚರಿಸಬೇಕೆಂದು ಕರೆ ನೀಡಿದರು.

ಕರವೇ ಗ್ರಾಮ ಘಟಕದ ಅಧ್ಯಕ್ಷ ರೇವಣ್ಣ ನಾಯಕ ಮಾತನಾಡಿ ನಾವೆಲ್ಲ ಕನ್ನಡ ನಾಡಿನ ಮಕ್ಕಳು, ಕನ್ನಡದ ರಕ್ಷಣೆಗೆ, ನೊಂದ ಜನರಿಗೆ ನ್ಯಾಯ ಕೊಡಿಸಲು ಎಂತಹ ಪರಿಸ್ಥಿತಿಯಲ್ಲೂ ಹೋರಾಟಕ್ಕೆ ಸಿದ್ದ ಎಂದು ಹೇಳಿದರು.

ಯುವಕರು, ಹಿರಿಯರು, ಪ್ರತಿಯೊಬ್ಬರೂ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ ನಮ್ಮ ಕನ್ನಡ ನಾಡಿಗೆ ಗೌರವ ಸಲ್ಲಿಸಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಗ್ರಾ. ಪಂ ಅಧ್ಯಕ್ಷ ನಾಗರಾಜು, ಕರವೇ ಹಂಪಾಪುರ ಗ್ರಾಮ ಘಟಕದ ಅಧ್ಯಕ್ಷ ರೇವಣ್ಣ ನಾಯಕ, ಸಮುದಾಯದ ಯಜಮಾನರುಗಳಾದ ಪುಟ್ಟಸ್ವಾಮಿನಾಯಕ, ನಾಗರಾಜು, ಶಿವಣ್ಣ, ಗೋಪಾಲನಾಯಕ, ಮಹೇಶ್, ಮೂರ್ತಿ, ರಂಗಸ್ವಾಮಿ ನಾಯಕ, ಗುರುಮಲ್ಲ ನಾಯಕ, ಹಾಗೂ ಯುವಕರು ಗ್ರಾಮಸ್ಥರು ಪಾಲ್ಗೊಂಡಿದ್ದರು.