(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಅಪಘಾತ ತಡೆ ಮತ್ತು ಸುರಕ್ಷತೆಗೆ ಆಗ್ರಹಿಸಿ ಜುಲೈ 4 ರಂದು ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲು ಸತ್ತೇಗಾಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತೀರ್ಮಾನಿಸಿದ್ದಾರೆ.
ಸತ್ತೇಗಾಲ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಅಪಘಾತಗಳಿಂದ ಸಾವು-ನೋವುಗಳು ಹೆಚ್ಚಾಗುತ್ತಿದ್ದರೂ ಜನಪ್ರತಿನಿಧಿಗಳು ಅಧಿಕಾರಿಗಳ ನಡೆಯನ್ನು ಸ್ಥಳೀಯ ಜನರು ತೀವ್ರವಾಗಿ ಖಂಡಿಸಿದ್ದಾರೆ.
ಶುಕ್ರವಾರ ಸತ್ತೇಗಾಲ ಗ್ರಾಮದ ನಟರಾಜು ಮತ್ತು ಮಾಯಪ್ಪ ಅಲಿಯಾಸ್ ಮಹೇಶ್ ಎಂಬ ರೈತರು ತಮ್ಮ ಜಮೀನಿಗೆ ಬೈಕ್‌ನಲ್ಲಿ ತೆರಳುವಾಗ ಎದುರಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಇಬ್ಬರೂ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದರು.
ಈ ಇಬ್ಬರು ರೈತರ ಸಾವಿನಿಂದ ಕಂಗಾಲಾಗಿರುವ ಸತ್ತೇಗಾಲ, ಎಡಕುರಿಯಾ, ಅಗ್ರಹಾರ, ಹ್ಯಾಂಡ್ ಪೋಸ್ಟ್, ಶಿವನಸಮುದ್ರ, ಜಾಗೇರಿ ಹಾಗೂ ಇನ್ನಿತರ ಗ್ರಾಮಗಳ ಮುಖಂಡರು ಗ್ರಾಮಪಂಚಾಯಿತಿ ಅಧ್ಯಕ್ಷರು, ಸದಸ್ಯರು, ರೈತ ಸಂಘದ ಪದಾಧಿಕಾರಿಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಮುಖಂಡರು ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬೈಪಾಸ್ ರಸ್ತೆಯಲ್ಲಿ ಸೇರಿದ್ದ ಸಭೆಯಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿ,ಜುಲೈ 4 ರಂದು ರಸ್ತೆ ತಡೆ ಮಾಡಲು ತೀರ್ಮಾನ ಕೈಗೊಂಡರು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಗ್ರಾಮಗಳ ಮುಖಂಡರು ಮಾತನಾಡಿ ಬೈಪಾಸ್ ರಸ್ತೆಯಲ್ಲಿ ಪ್ರತಿದಿನ ಒಂದಲ್ಲಾ ಒಂದು ಸಾವು-ನೋವುಗಳು ಸಂಭವಿಸುತ್ತಿದೆ, ಈ ಸ್ಥಳಗಳಲ್ಲಿ ಮೇಲುಸೇತುವೆ ನಿರ್ಮಿಸಿ ಕೊಡಬೇಕು ಹಾಗೂ ಬೈಪಾಸ್‌ನಲ್ಲಿ ಸಾರಿಗೆ ಬಸ್ಸುಗಳು ತೆರಳುತ್ತಿದ್ದು ಪ್ರಯಾಣಿಕರು ಪರಿತಪಿಸುವಂತಾಗಿದೆ. ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ವಾಹನಗಳ ಚಾಲಕರು ಅತೀ ವೇಗವಾಗಿ ಚಾಲನೆ ಮಾಡುವುದರಿಂದ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿ ಸಾರ್ವಜನಿಕರು ಮತ್ತು ವಾಹನ ಸವಾರರು ದಾರುಣವಾಗಿ ಸಾವನ್ನಪ್ಪುತ್ತಿದ್ದಾರೆ. ಅಪಘಾತಗಳು ಸಂಭವಿಸುತ್ತಿರುವ ಸ್ಥಳಗಳಾದ ಹ್ಯಾಂಡ್ ಪೋಸ್ಟ್ ಬೈಪಾಸ್ ಗ್ರಾಮದ ರೈತರು ಜಮೀನುಗಳಿಗೆ ತೆರಳುವ ರಸ್ತೆ, ಸತ್ತೇಗಾಲದಿಂದ ಉಗನಿಯಾ ಗ್ರಾಮಕ್ಕೆ ತೆರಳುವ ರಸ್ತೆ, ಕೊಳ್ಳೇಗಾಲ-ಸತ್ತೇಗಾಲ ಈ ರಸ್ತೆಗಳಲ್ಲಿ ಮೇಲುಸೇತುವೆ ನಿರ್ಮಿಸಿ ಅಪಘಾತಗಳನ್ನು ತಡೆಯಿರಿ ಎಂದು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಡಿವೈಎಸ್‌ಪಿ, ಗ್ರಾಮಾಂತರ ಪೊಲೀಸ್ ಠಾಣೆಯ ಎಸೈ ಹಾಗೂ ರಸ್ತೆಸಾರಿಗೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರು ಕ್ರಮ ಕೊಂಡಿಲ್ಲ,ಇದರ ಬಗ್ಗೆ ವಿಷಯ ತಿಳಿದರೂ ಶಾಸಕ ಎಂ. ಆರ್. ಮಂಜುನಾಥ್, ಸಂಸದ ಸುನೀಲ್ ಬೋಸ್, ಮಾಜಿ ಶಾಸಕ ಆರ್.ನರೇಂದ್ರ ಇವರುಗಳು ಸಹ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸತ್ತೇಗಾಲ ಹಾಗೂ ಹ್ಯಾಂಡ್ ಪೋಸ್ಟ್ ಗ್ರಾಮದೊಳಗೆ ಬಸ್ಸುಗಳು ಸಂಚಾರ ಮಾಡಿಸುವಂತೆ ಒತ್ತಾಯಿಸಿ ಜುಲೈ 4 ರಂದು ಸತ್ತೇಗಾಲ ಹ್ಯಾಂಡ್ ಪೋಸ್ಟ್‌ನ ಬೈಪಾಸ್ ರಸ್ತೆಯಲ್ಲಿ ರಸ್ತೆ ಚಳವಳಿ ಮಾಡಲು ಜೂನ್ 30 ರಂದು ಉಪವಿಭಾಗಾಧಿಕಾರಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗೆ ಮನವಿಪತ್ರ ನೀಡಿ ಬಳಿಕ ಕರಪತ್ರವನ್ನು ಎಲ್ಲಾ ಸಮುದಾಯದ ಮನೆ ಮನೆಗಳಿಗೆ ಹಂಚಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನ ಕೈಗೊಂಡರು.
ಹನೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮುಕುಂದವರ್ಮ, ಗ್ರಾಂ.ಪಂ. ಅಧ್ಯಕ್ಷ ಮಲ್ಲೇಶ್, ಸದಸ್ಯರು ಗಳಾದ ಗೋವಿಂದ, ನವೀನ್ ಕುಮಾರ್, ಆರೋಗ್ಯಸ್ವಾಮಿ, ಡಾ.ಬಿ. ಆರ್. ಅಂಬೇಡ್ಕರ್ ಸತ್ಯಾದ್ರಿ ಯುವಕ ಸಂಘದ ಅಧ್ಯಕ್ಷ ಅವಿನಾಶ್, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಮಾದೇಗೌಡ, ತಾಪಂ ಮಾಜಿ ಸದಸ್ಯ ಅರುಣ್, ರೈತ ಸಂಘದ ಬಾಸ್ಕರ್, ಮಾದಪ್ಪ, ಕುಮಾರ, ಚಾರ್ಲಿಸ್, ಮುಖಂ ಡರುಗಳಾದ ಹ್ಯಾಂಡ್ ಪೋಸ್ಟ್ ಮಾದೇವು, ರವಿಶಂಕರ್, ಟಿ.ಮಹದೇವಯ್ಯ, ನಾರಾಯಣಸ್ವಾಮಿ, ಕಾಂತರಾಜು, ನಂಜುಂಡಮೂರ್ತಿ, ಗುಲ್ಲಾ ಶಿವಣ್ಣೆ ಗೌಡ, ಬಸವಣ್ಣ, ಸಿದ್ದರಾಜು, ಎಡಕುರಿಯಾ ಬಸವರಾಜು, ನಂಜುಂಡ, ಶಾಂತರಾಜು, ಪ್ರಭು, ಶಿವಲಿಂಗ, ರಾಜಶೇಖರ್, ಸಂಜು, ಬಸವ, ಶಾಮಿಯಾನ ನಾಗರಾಜು, ಬಾಟಲ್ ನಾಗರಾಜು, ಶಿವನಸಮುದ್ರದ ಚಿಕರಾವಳಯ್ಯ, ಕಾಳಯ್ಯ, ಚಂದ್ರಶೇಖರ್, ನಾಗೇಂದ್ರ, ಪುಟ್ಟರಾಚ, ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಡಾ.ಬಿ.ಆರ್ ಅಂಬೇಡ್ಕರ್ ಸತ್ಯಾದ್ರಿ ಯುವಕ ಸಂಘದ ಪದಾಧಿಕಾರಿಗಳು, ಹಲವಾರು ಮುಖಂಡರು ಮತ್ತು ಯುವಕರು ಹಾಜರಿದ್ದರು.