ಜು ‌19 ಮೈಸೂರಿನಲ್ಲಿ ಕಾಂಗ್ರೆಸ್ ಸಾಧನ ಸಮಾವೇಶ:ಸಿದ್ದತೆ ವೀಕ್ಷಿಸಿದ ಮಹದೇವಪ್ಪ

Spread the love

ಮೈಸೂರು: ಜುಲೈ 19 ರಂದು ಮೈಸೂರಿನಲ್ಲಿ ಕಾಂಗ್ರೆಸ್ ಸಾಧನ ಸಮಾವೇಶ ನಡೆಯುವ ಹಿನ್ನಲೆಯಲ್ಲಿ ಬುಧವಾರ ಮಹಾರಾಜ ಕಾಲೇಜು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ವೇದಿಕೆ ಸ್ಥಳ ಪರಿಶೀಲನೆ ನಡೆಸಿದರು.

ಸರ್ಕಾರದ 2 ವರ್ಷ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್ ಸಾಧನ ಸಮಾವೇಶ ಹಮ್ಮಿಕೊಂಡಿದ್ದು, ಸಮಾವೇಶದಲ್ಲಿ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಭಾಗಿಯಾಗಲಿದ್ದಾರೆ.

ಸಾಧನ ಸಮಾವೇಶಕ್ಕೆ ಭರದ ಸಿದ್ದತೆ ನಡೆಸಲಾಗುತ್ತಿದ್ದು ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಹಾಕಲಾಗುತ್ತಿದೆ.ಆದ್ದರಿಂದ ಹೆಚ್.ಸಿ ಮಹದೇವಪ್ಪ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಭದ್ರತೆ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಂದು ಸರ್ಕಾರದ ಎರಡು ವರ್ಷದ ಸಾಧನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನ ಸಿಎಂ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಸಾಧನಾ ಸಮಾವೇಶದ ಮೂಲಕ ತವರಿನಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೂ ಮುಂದಾಗಿದ್ದು, ಸಿದ್ದತೆ ಕಾರ್ಯ ವೀಕ್ಷಣೆ ಮಾಡಿದ ಸಚಿವ ಎಚ್ ಸಿ ಮಹದೇವಪ್ಪಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಪೋಲಿಸ್ ಕಮಿಷನರ್ ಸೀಮಾ ಲಾಟ್ಕರ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಗೆ 3 ದಿನ ಪ್ರವಾಸ ಬರುತ್ತಿದ್ದಾರೆ. ಮೈಸೂರಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಮಂಜೂರು ಆಗಿತ್ತು. ಕೆಲವೊಂದು ಉದ್ಘಾಟನೆ ಆಗಬೇಕು. ಇನ್ನು ಅನೇಕ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಬೇಕು. ಜಿಲ್ಲೆಗೆ ಸರ್ಕಾರದಿಂದ ಏನೆಲ್ಲಾ ಅನುದಾನ ಬಂದಿದೆ ಎಂಬ ‌ಬಗ್ಗೆ ಚರ್ಚೆ ಮಾಡಿದ್ದೇವೆ. 502 ಕೋಟಿ ಹಣ ಲೋಕೋಪಯೋಗಿ ಇಲಾಖೆಗೆ ಬಂದಿದೆ. ಜಲ ಸಂಪನ್ಮೂಲ ಇಲಾಖೆಗೆ 419 ಕೋಟಿ ಹಣ ಬಂದಿದೆ. ಸೆಸ್ಕ್ ಗೆ 408 ಕೋಟಿ ರೂಪಾಯಿ ಹಣ ಬಂದಿದೆ. ಸಣ್ಣ ಕೈಗಾರಿಕೆಗೆ 198 ಕೋಟಿ ಹಣ ಕೊಟ್ಟಿದ್ದಾರೆ. ಜಿಲ್ಲಾ ಕೋಶದಿಂದ 120 ಕೋಟಿ ಹಣ ಬಂದಿದೆ. ವೈದ್ಯಕೀಯ ಶಿಕ್ಷಣ ಇಲಾಖೆಗೆ 100 ಕೋಟಿ ಕೊಟ್ಟಿದೆ . ಇತರೆ ಇಲಾಖೆಗಳಿಗೆ ನೂರಾರು ಕೋಟಿ ಹಣ ಕೊಟ್ಟಿದ್ದೇವೆ. 2569 ಕೋಟಿ ಹಣ ಮೈಸೂರು ನಗರ ವ್ಯಾಪ್ತಿಗೆ ಸರ್ಕಾರದಿಂದ ಬಂದಿದೆ. ಹೀಗಾಗಿ ಮೈಸೂರು ಜಿಲ್ಲೆಯಲ್ಲಿ ಸರ್ಕಾರದ ಸಾಧನ ಸಮಾವೇಶ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಜುಲೈ 19 ರಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಮಾಡಲಿದ್ದಾರೆ ಎಂದು ಹೇಳಿದರು.

ಸಾಧನಾ ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಲಿದ್ದಾರೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡುತ್ತಿದೆ. ಮೈಸೂರು ಸರ್ವಾಂಗೀಣ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಪಣ ತೊಟ್ಟಿದ್ದಾರೆ. ಕಾರ್ಯಕ್ರಮಕ್ಕೆ ಕೇಂದ್ರದಿಂದ ಮಲ್ಲಿಕಾರ್ಜುನ್ ಖರ್ಗೆ ಬರಲಿದ್ದಾರೆ ಎಂದು ಮಾಹಿತಿ ನೀಡಿದರು.