ಮೈಸೂರು: ಮೈಸೂರಿನ ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ 7ನೇ ಘಟಿಕೋತ್ಸವ ಮಾ. 24ರಂದು ನಡೆಯಲಿದೆ.
ಕಾಲೇಜಿನಲ್ಲಿ ಇಂದು ನಡೆದ ಮಾಧ್ಯಮ ಗೋಷ್ಟಿಯಲ್ಲಿ ಕುಲಸಚಿವ ಪ್ರೊ. ಎಸ್. ಎ. ಧನರಾಜ್ ಅವರು ಈ ಕುರಿತು ಮಾಹಿತಿ ನೀಡಿದರು.
ಘಟಿಕೋತ್ಸವ ಸಮಾರಂಭವು ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಕುಲಾಧಿಪತಿಗಳಾದ ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಪದವಿ ಮತ್ತು ಪದಕಗಳನ್ನು ಪ್ರದಾನ ಮಾಡಲಾಗುವುದು, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನಿಶ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಅವರು ಹೇಳಿದರು.
7ನೇ ಕಟಿಕೋತ್ಸವದಲ್ಲಿ ಬಿಎ- 992 , ಬಿಸಿಎ-51, ಎಂಟೆಕ್-90, ಎಂಸಿಎ-114, ಎಂಎಸ್ಸಿ-140, ಎಂಬಿಎ-282 ಹಾಗೂ ವಿವಿಧ ವಿಭಾಗಗಳಲ್ಲಿ ಡಾಕ್ಟರೇಟ್ ಪದವಿ ಪಡೆಯಲಿರುವ 9 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದು ಒಟ್ಟು 1678 ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಶೀಲ ಸಾಧನೆಯನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಒಟ್ಟು 148 ರ್‍ಯಾಂಕ್ ಮತ್ತು 64 ಪದಗಳು ವಿತರಿಸಲಾಗುತ್ತಿದೆ. ಪದಕಗಳಲ್ಲಿ 30 ಸುವರ್ಣ ಪದಕಗಳಿದ್ದು ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು, 34 ದತ್ತಿ ಪದಕಗಳನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದವರು ತಿಳಿಸಿದರು.
ಯುವ ಪದವೀಧರರು ಪದವಿಯನ್ನು ಪಡೆದು ಉದ್ಯಮ ಕ್ಷೇತ್ರಗಳಲ್ಲಿ ಮುನ್ನಡೆಯುವುದರ ಜೊತೆಗೆ ನೂತನ ಆವಿಷ್ಕಾರಗಳು ಸಮಾಜ ಸುಧಾರಣಾ ಗುಣಗಳು ಮತ್ತು ಜೀವನದ ಉದ್ದೇಶಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ಅವರು ತಿಳಿಸಿದರು.
ಉದ್ಯಮ ಪ್ರವೃತ್ತಿಯಲ್ಲಿ ಮುಂಚೂಣಿಯಲ್ಲಿರುವ ಉದ್ದೇಶ ಮತ್ತು ಅತ್ಯಾಧುನಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಲು ಶ್ರಮಿಸುತ್ತಿರುವ ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯು ಮುಂಬರುವ ಶೈಕ್ಷಣಿಕ ವರ್ಷದಿಂದ ಐದು ನೂತನ ಶೈಕ್ಷಣಿಕ ಕಾರ್ಯ ಕ್ರಮಗಳನ್ನು ಪ್ರಾರಂಭಿಸುತ್ತಿದೆ ಎಂದು ಪ್ರೊ. ಎಸ್. ಎ. ಧನರಾಜ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಪ್ರೊ. ನಟರಾಜ್, ಪ್ರೊ. ಸಂತೋಷ್ ಕುಮಾರ್ ಹಾಗೂ ಪ್ರೊ. ನಂಜುಂಡಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.