ಪತ್ರಕರ್ತರ ನೆರವಿಗೆ ಚಾ.ನಗರ ಕಾರ್ಯನಿರತ ಪತ್ರಕರ್ತರ ಸಂಘ:ಶಿವಾನಂದ ತಗಡೂರು ಶ್ಲಾಘನೆ

Spread the love

ಕೊಳ್ಳೇಗಾಲ: ಸಂಕಷ್ಟಕ್ಕೆ ಒಳಗಾದ ಪತ್ರಕರ್ತರ ನೆರವಿಗೆ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನಿಂತಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾನುವಾರ ಕೊಳ್ಳೇಗಾಲಕ್ಕೆ ಆಗಮಿಸಿದ ವೇಳೆ ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡಿದ್ದ ಸಂಘದ ಸದಸ್ಯರುಗಳಾದ ಎಂ.ವಸಂತ್ ಕುಮಾರ್ ಹಾಗೂ ಬಿ. ಕುಮಾರ್ ಅವರಿಗೆ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿಯಿಂದ ತಲಾ 5, ಸಾವಿರ ರೂ.ಗಳ ಆರ್ಥಿಕ ನೆರವಿನ ಚೆಕ್ ಗಳನ್ನು ವಿತರಿಸಿ ಅವರು ಮಾತನಾಡಿದರು.

ನಮ್ಮ ಸಂಘದಲ್ಲಿ ಸದಸ್ಯರಾಗಿರುವ ಯಾವುದೇ ಪತ್ರಕರ್ತರು ಅಪಘಾತದಿಂದ ಗಾಯಗೊಂಡು, ಅಥವಾ ಗಂಭೀರ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದರೆ ಕೂಡಲೇ ಅಂಥವರ ನೆರವಿಗೆ ದಾವಿಸುವಂತಹ ಕೆಲಸವನ್ನು ನಾವು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಸಂಘದ ವ್ಯಾಪ್ತಿಯಲ್ಲಿ ಅವರಿಂದ ಸಾಧ್ಯ ವಾದಂತಹ ಸಹಾಯವನ್ನು ಅವರು ಮಾಡುತ್ತಾರೆ. ಅದರಾಚೆಗೆ ಕೂಡ ಏನಾದರೂ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಗಳಾಗಿದ್ದರೆ ರಾಜ್ಯ ಸಂಘ ಕೂಡ ಸ್ಪಂದಿಸುತ್ತದೆ. ಇನ್ನೂ ಅದರಾಚೆಗೆ ಸಮಸ್ಯೆಗಳಾದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೊಡಿಸುವ ಕೆಲಸವನ್ನು ಮಾಡಿದ್ದೇವೆ. ಕಳೆದ ಬಾರಿ ಕೊಳ್ಳೇಗಾಲ ಸಮೀಪದ ಮಾಂಬಳ್ಳಿ ಗ್ರಾಮದ ಪತ್ರಕರ್ತ ಸೆಲ್ವರಾಜ್ ಅವರು ಕೋವಿಡ್ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಸಾವಿಗಿಡಾದ ವೇಳೆ 5 ಲಕ್ಷ ರೂಗಳ ಪರಿಹಾರದ ಹಣ ಕೊಡಿಸಿದ್ದು ಕೂಡಾ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಹೋರಾಟದ ಫಲ ಎಂದು ತಿಳಿಸಿದರು.

ಹೀಗೆ ನಮ್ಮ ಸಂಘದ ಸದಸ್ಯರ ಶ್ರೇಯಾಭಿವೃದ್ಧಿಯನ್ನ ಅವರ ಹಿತಾಸಕ್ತಿಯನ್ನು ಕಾಪಾಡುವಂತಹ ಕೆಲಸವನ್ನು ನಾವು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ. ಇಂದೂ ಸಹ ಇಬ್ಬರು ಸದಸ್ಯರಿಗೆ ತಲಾ 5, ಸಾವಿರ ರೂ.ಗಳ ಚೆಕ್ ಅನ್ನು ನೀಡಿದ್ದೇವೆ ಅವರು ಬಹುಬೇಗ ಗುಣಮುಖರಾಗಲಿ ಎಂದು ಶಿವಾನಂದ ತಗಡೂರು ಹಾರೈಸಿದರು.

ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ರಾಜ್ಯ ಸಮಿತಿ ಸದಸ್ಯ ಗೂಳೀಪುರ ನಂದೀಶ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಸಿದ್ದರಾಜು, ಉಪಾಧ್ಯಕ್ಷ ಎಂ.ಮರಿಸ್ವಾಮಿ ಹಾಜರಿದ್ದರು.