ಮೈಸೂರು: ಹೆಚ್. ಡಿ.ಕೋಟೆ ಹಾಗೂ ಹುಣಸೂರು ತಾಲೂಕಿನ ಬಸವ, ಅಂಬೇಡ್ಕರ್, ಪಿಎಂಎವೈ ಮತ್ತು ಪಿಎಂ ಜನ್ಮನ್ ವಸತಿ ಯೋಜನೆಯಡಿ ಗ್ರಾಮ ಪಂಚಾಯಿತಿಗಳಲ್ಲಿ ಪ್ರಗತಿಯಲ್ಲಿರುವ ಹಾಗೂ ಪ್ರಾರಂಭವಾಗದಿರುವ ಮನೆಗಳ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಹೆಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ, ಚಕ್ಕೋಡನಹಳ್ಳಿ ಹಾಗೂ ಅಣ್ಣೂರು ಗ್ರಾಮ ಪಂಚಾಯಿತಿ ಹಾಗೂ ಹುಣಸೂರು ತಾಲೂಕಿನ ಗುರುಪುರ ಗ್ರಾಮ ಪಂಚಾಯಿತಿಯಲ್ಲಿರುವ ನಾಗಾಪುರ-4ನೇ ಹಾಡಿಗೆ ಭೇಟಿ ಕೊಟ್ಟು ಪರಿಶೀಲಿಸಿದರು.
ಮನೆಗಳ ಪರಿಶೀಲನೆ ಸಂದರ್ಭದಲ್ಲಿ ಕೆಲವು ಫಲಾನುಭವಿಗಳು ಮನೆಗಳನ್ನು ಪೂರ್ಣಗೊಳಿಸದಿರುವುದು ಕಂಡು ಬಂದಿದ್ದು, ತುರ್ತಾಗಿ ಪ್ರಗತಿ ಸಾಧಿಸುವಂತೆ ಹಾಗೂ ಪೂರ್ಣಗೊಂಡ ಮನೆಗಳ ಜಿಯೋ ಟ್ಯಾಗ್ ಅನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮವಹಿಸುವಂತೆ ಪಿಡಿಒ ಅವರಿಗೆ ತಾಖೀತು ಮಾಡಿದರು
2018ರ ಸಮೀಕ್ಷೆ ಪಟ್ಟಿಯಲ್ಲಿರುವ ಅರ್ಹ ಫಲಾನುಭವಿಗಳ ಅನುಮೋದನೆ ಪಡೆದುಕೊಂಡು, ಅನರ್ಹರನ್ನು ರದ್ದುಗೊಳಿಸಲು ಸಭಾ ನಡವಳಿಯೊಂದಿಗೆ ಒಂದು ವಾರದೊಳಗೆ ತಾ.ಪಂ ಕಚೇರಿಗೆ ಸಲ್ಲಿಸಲು ಪಿಡಿಒ ರವರಿಗೆ ಸೂಕ್ತ ನಿರ್ದೇಶನ ನೀಡಿ ಪ್ರಸ್ತಾವನೆಯನ್ನು ಪಡೆದುಕೊಂಡು ಅನರ್ಹರನ್ನು ರದ್ದಗೊಳಿಸಲು ಸೂಕ್ತ ಕ್ರಮವಹಿಸಲು ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.
ಬಳಿಕ ಅನುಮೋದನೆಗೊಂಡಿರುವ ಮನೆಗಳ ಫಲಾನುಭವಿಗಳೊಂದಿಗೆ ಚರ್ಚಿಸಿ, ಈಗಾಗಲೇ ಪಿಎಂಎವೈ ಅಡಿ ಮೊದಲನೇ ಕಂತಿನ ಅನುದಾನ ಮಂಜೂರಾಗಿದ್ದರೂ, ಈವರೆವಿಗೂ ಯಾವ ಕಾರಣಕ್ಕಾಗಿ ಮನೆ ಪೂರ್ಣಗೊಳಿಸಿಲ್ಲವೆಂದು ಯುಕೇಶ್ ಪ್ರಶ್ನಿಸಿದರು.
ಕೂಡಲೇ ಅರ್ಧಕ್ಕೆ ನಿಲ್ಲಿಸಿರುವ ಕಾಮಗಾರಿಯನ್ನು ತಮಗೆ ನೀಡಿರುವ ಸಮಯವಕಾಶದಲ್ಲಿ ಉತ್ತಮ ಗುಣಮಟ್ಟವುಳ್ಳ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುವಂತೆ ಹಾಗೂ ಸರ್ಕಾರ ಜನರಿಗಾಗಿ ನೀಡುತ್ತಿರುವ ಸೌಲಭ್ಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಈ ವೇಳೆ ಜಿಲ್ಲಾ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ,ಹೆಚ್.ಡಿ ಕೋಟೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಧರಣೇಶ್ ಎಸ್.ಪಿ , ಹುಣಸೂರು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೊಂಗಯ್ಯ, ಹೆಚ್.ಡಿ ಕೋಟೆ ತಾಲೂಕಿನ ಸಹಾಯಕ ನಿರ್ದೇಶಕ ( ಗ್ರಾ ಉ) ರಘುನಾಥ್ ಕೆ.ಎಂ, ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ಮಲ್ಲೇಶ್, ಹುಣಸೂರು ತಾಲ್ಲೂಕು ಮಟ್ಟದ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ಗಂಗಾಧರ್, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.