ಮೈಸೂರು: ಇತಿಹಾಸದ ಅರಿವಿಲ್ಲದೇ ಮನುಷ್ಯ ಬದುಕಲಾರ ಎಂದು ಮೈಸೂರು ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಡಾ.ಕೆ.ಎಸ್.ರಂಗಪ್ಪ ಅವರು ತಿಳಿಸಿದರು.
ಜಿಲ್ಲಾ ಇತಿಹಾಸ ವೇದಿಕೆ ಹಮ್ಮಿಕೊಂಡಿದ್ದ ಇತಿಹಾಸ ಸಂಭ್ರಮ -2 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನಿ,ವೈದ್ಯ,ಶಿಕ್ಷಕ,ಯಾವುದೇ ವೃತ್ತಿಯವರಿಗೂ ಇತಿಹಾಸದ ಜ್ಞಾನ ಅತ್ಯವಶ್ಯಕ ಎಂದು ಹೇಳಿದರು.
ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಸಾರ್ಥಕ ಕೆಲಸ ಎಂದು ಅವರು ಪ್ರಶಂಸಿಸಿದರು.
ವಿಶೇಷ ಉಪನ್ಯಾಸ ನೀಡಿದ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರಾದ ಡಾ.ಕೆ ಸದಾಶಿವ ಅವರು ಪ್ರಾಚೀನ ಭಾರತದ ಇತಿಹಾಸ ಬೋಧಿಸುವ ವಿಧಾನ ಮತ್ತು ವೈಶಿಷ್ಟ್ಯಗಳನ್ನು ತಿಳಿಸಿದರು.
ಇತ್ತೀಚಿನ ಹೊಸ ಹೊಸ ಸಂಶೋಧನೆಗಳನ್ನು ಉಪನ್ಯಾಸಕರು ಗಮನಿಸುತ್ತಾ ಮಕ್ಕಳಿಗೆ ಇತಿಹಾಸದ ಸತ್ಯಾಸತ್ಯತೆಯನ್ನು ತಿಳಿಸಬೇಕೆಂದು ಸಲಹೆ ನೀಡಿದರಲ್ಲದೆ ಹೊಸ ವಿಮರ್ಶೆಗಳಿಗೆ,ಹೊಸ ಶೋಧನೆಗಳಿಗೆ ಒಗ್ಗಿಕೊಳ್ಳುತ್ತಾ ಇತಿಹಾಸದ ನಿಖರತೆಗಳನ್ನು ಗುರುತಿಸಬೇಕು ಎಂದು ಹೇಳಿದರು.
ಪ್ರಾಚಾರ್ಯರ ಸಂಘದ ಅಧ್ಯಕ್ಷ ಹನುಮಂತರಾವ್ ದ್ವಿತೀಯ ಪಿಯುಸಿ ಕೈಪಿಡಿ ಬಿಡುಗಡೆ ಮಾಡಿದರು.
ಕಳೆದ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಯಲ್ಲಿ ಶೇ 100 ರಷ್ಟು ಫಲಿತಾಂಶ ತಂದ ಉಪನ್ಯಾಸಕರನ್ನು ಮತ್ತು ಇತಿಹಾಸ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿದ ಶಿವಪ್ರಕಾಶ್ ಮತ್ತು ಜಯಕುಮಾರ್ ಅವರುಗಳನ್ನು ಗೌರವಿಸಲಾಯಿತು.
ವೇದಿಕೆಯ ಗೌರವಾಧ್ಯಕ್ಷ ಎಂ ಸಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪ್ರಾಂಶುಪಾಲರಾದ ಸುದೀಪ್, ಮಹಾರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಉದಯ್ ಶಂಕರ್, ಇತಿಹಾಸ ವೇದಿಕೆಯ ಅಧ್ಯಕ್ಷರಾದ ಹೆಚ್ ಬಿ ವಾಸು,ಕಾರ್ಯಾಧ್ಯಕ್ಷರಾದ ಉಮೇಶ್, ಮಹದೇವಯ್ಯ,ಪೂರ್ಣಚಂದ್ರ, ಮಹೇಶ್, ಗಣೇಶ್,ಡಾ.ಉಮೇಶ್,ಸತ್ಯನಾರಾಯಣ, ಗಣೇಶ್,ಹೆಚ್ ಬಿ ವಾಸು ಮತ್ತಿತರರು ಉಪಸ್ಥಿತರಿದ್ದರು.