ಮೈಸೂರು: ಸನಾತನ ಧರ್ಮದಲ್ಲಿ ದಾನಕ್ಕೆ ಅಪಾರ ಮಹತ್ವವಿದೆ,ಫಲಾಪೇಕ್ಷೆ ಇಲ್ಲದೆ ದಾನ ನೀಡುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಬೇಬಿ ಮಠ ಮತ್ತು ಚಂದ್ರವನ ಆಶ್ರಮದ ಪೀಠಾಧ್ಯಕ್ಷರಾದ ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳು ತಿಳಿಸಿದರು.
ದಾನ ಧರ್ಮದಿಂದ ವರ್ತಮಾನ, ಭವಿಷ್ಯ ಹಾಗೂ ಮುಂದಿನ ಜನ್ಮದಲ್ಲೂ ಪುಣ್ಯ ಫಲ ಸಿಗುವ ನಂಬಿಕೆ ಇದೆ ಎಂದು ಹೇಳಿದರು.

ಮೈಸೂರಿನ ಜೀವದಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ 2025ರ ರಕ್ತದಾನದ ಮಹತ್ವದ ಜಾಗೃತಿಯ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡುವ ಅಗತ್ಯವಿದೆ. ಉಪಯೋಗವಾಗುವುದನ್ನು ನೀಡುವುದು ಬಹಳ ಮುಖ್ಯ. ಆ ಮೂಲಕ ವ್ಯಕ್ತಿ ,ಸಮಾಜದ ಸಂಬಂಧ ಮಧುರವಾಗಿರಲು, ಸಾಮಾಜಿಕ ಸಾಮರಸ್ಯ ಬೆಳೆಯಲು ಕಾರಣವಾಗುತ್ತದೆ ಎಂದು ತಿಳಿಸಿದರು.
ತಾನು ಕೊಡಲಾಗದಿದ್ದರು ಕೊಡಬಲ್ಲವರಿಂದ ದಾನ ಕೊಡಿಸಿ ಸಮಾಜದ ಹಿತ ಕಾಪಾಡಬೇಕು. ದಾನ ಮಾಡುವ ಕೈಗಳು ಸದಾ ಪುಣ್ಯದ ಕೈಗಳಾಗುತ್ತವೆ. ಶ್ರೀಮಂತ ಮತ್ತು ಬಡವ ಎಂಬ ಭೇದಭಾವವಿಲ್ಲದೆ ಪ್ರತಿಯೊಬ್ಬರು ನೀಡುವಿಕೆಯ ಗುಣವನ್ನು ಬೆಳೆಸಿಕೊಳ್ಳಬೇಕು.
ಜ್ಞಾನವನ್ನು ,ಸ್ನೇಹವನ್ನು ,ಹಂಚಿದರೆ ಅವು ನಮಗೆ ಕಾವಲಾಗುತ್ತದೆ. ಭೂದಾನ,ಗೋ ದಾನ,ಆಹಾರ, ಅಂಗಾಂಗಗಳ ದಾನ ,ರಕ್ತದಾನ, ವಿವಿಧ ರೀತಿಯಲ್ಲಿ ನೀಡುವ ಗುಣ ಪುರಾತನ ಕಾಲದಿಂದಲೂ ಇದೆ. ಯುವಕರು, ವಿದ್ಯಾರ್ಥಿಗಳು ಬಾಲ್ಯದಿಂದಲೂ ಪರಸ್ಪರ ನೆರವಾಗುವ, ಸಹಾಯ ಹಸ್ತ ಚಾಚುವ ಮನಸ್ಸನ್ನು ಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುತ್ತಣ್ಣ, ಜಿ ರಾಘವೇಂದ್ರ,ಆಲನಹಳ್ಳಿ ಎಂ ಎನ್ ಚೇತನ್ ಗೌಡ, ಮಮತಾ, ಸುರೇಶ್, ಪ್ರಭು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.