ಬೆಂಗಳೂರು: ಸಾಕಪ್ಪ ಸಾಕು ಕಾಂಗ್ರೆಸ್ ಸಾಕು ಅಭಿಯಾನ ನಮ್ಮ ಸ್ಲೋಗನ್ ಅಲ್ಲ, ನಾಡಿನ ಎಳೂವರೆ ಕೋಟಿ ಜನರ ದನಿ. ಸಾಮಾನ್ಯ ಕನ್ನಡಿಗನ ಕಣ್ಣೀರ ಕೂಗು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಸರ್ಕಾರ ದುರಾಡಳಿತ, ಭ್ರಷ್ಟಾಚಾರದ ಜತೆಗೆ ಐದು ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಸಂಪತ್ತನ್ನ ಲೂಟಿ ಮಾಡುತ್ತಿದೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರದ ದುರಾಡಳಿತ, ಬೆಲೆ ಏರಿಕೆ ವಿರೋಧಿಸಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಸಾಕು, ಇದು ರಾಜ್ಯದ ಜನರ ಮನೆ ಮನೆಯ ಮಾತು. ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಿದೆ ಎಂದು ಅವರು ತಿಳಿಸಿದರು.
ನಾವು ನಮ್ಮ ಜವಾಬ್ದಾರಿ, ಕರ್ತವ್ಯ ಅರಿತು ಈ ಪ್ರತಿಭಟನೆ ಮಾಡುತ್ತಿದ್ದೇವೆ. ಕೇಂದ್ರ ಸಚಿವರಾದ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಬೃಹತ್ ಹೋರಾಟ ಮಾಡುತ್ತಿದ್ದೇವೆ. ಆಡಳಿತ ವೈಫಲ್ಯ, ಭ್ರಷ್ಟಾಚಾರ ಮಾತ್ರವಲ್ಲ ಅನೇಕ ವಿಚಾರಗಳ ಬಗ್ಗೆ ನಮ್ಮ ಹೋರಾಟ ನಡೆಯಲಿದೆ, ಇದು ಒಂದು ದಿನದ ಅಭಿಯಾನ ಅಲ್ಲ ಸರ್ಕಾರ ಇರೋ ತನಕ ನಮ್ಮ ಹೋರಾಟ ನಿರಂತರ ವಾಗಿರುತ್ತದೆ ಎಂದು ತಿಳಿಸಿದರು.
ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಾಕಪ್ಪ ಸಾಕು ಈ ಕಾಂಗ್ರೆಸ್ ಸರ್ಕಾರ ಸಾಕು ಅನ್ನೋ ಭಾವನೆ ಜನರ ಮನಸಿನಲ್ಲಿ ಬಂದಿದೆ. ಜನ ವಿರೋಧಿ ಸರ್ಕಾರ ಜನರನ್ನು ಕಿತ್ತು ತಿನ್ನುತ್ತಿದೆ. ಕಾಂಗ್ರೆಸ್ಸಿನ ದುರಾಡಳಿತಕ್ಕೆ ದಿಟ್ಟ ಉತ್ತರ ನೀಡಬೇಕಿದೆ. ಈ ಹೊರಟ್ಟಕ್ಕೆ ನಮ್ಮ ಜತೆ ಕೈ ಜೋಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದು ನಿಖಿಲ್ ಜನತೆಯಲ್ಲಿ ಮನವಿ ಮಾಡಿದರು.
ಕಳೆದ ಚುನಾವಣೆಯಲ್ಲಿ ಇದೇ ಕಾಂಗ್ರೆಸ್ಸಿಗರು ಅಂದು ಇದ್ದಂತ ಸರ್ಕಾರದ ವಿರುದ್ಧ ಪೇ ಸಿಎಂ ಅಭಿಯಾನ ಮಾಡಿದ್ದರು.40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ನಮಗೊಂದು ಅವಕಾಶ ಕೊಡಿ ನಾವು ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿದ್ದರು.ಈಗ ಭ್ರಷ್ಟಾಚಾರ ಅನ್ನುವುದು ಯಾವ ಹಂತಕ್ಕೆ ತಲುಪಿದೆ ಎಂದರೆ ಪರ್ಸೆಂಟೇಜ್ ಅನ್ನುವುದಕ್ಕೆ ಲಿಮಿಟೆಷನ್ ಇಲ್ಲದಂತಾಗಿದೆ ನಿಖಿಲ್ ಟೀಕಿಸಿದರು.
ಬಸವರಾಜ ರಾಯರೆಡ್ಡಿ ಅವರು ಸರ್ಕಾರದ ಭ್ರಷ್ಟಾಚಾರದ ವಿಚಾರವಾಗಿ ಮಾತನಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಭ್ರಷ್ಟಾಚಾರ ಅನೇಕ ಸರ್ಕಾರಗಳಲ್ಲಿ ಇದೆ, ಇಲ್ಲ ಅಂತ ಹೇಳೋದಿಲ್ಲ. ಆದರೆ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಅಂತ ರಾಯರೆಡ್ಡಿ ಅವರೇ ತಿಳಿಸಿದ್ದಾರೆ. ಅವರು ಹೇಳಿರುವುದನ್ನು ಗೌರವಿಸುತ್ತೇವೆ ಎಂದರು ನಿಖಿಲ್ ಕುಮಾರಸ್ವಾಮಿ.