ಸರ್ಕಾರಿ ಆಸ್ಪತ್ರೆ ಆವರಣದ ಜನೌಷಧಿ ಕೇಂದ್ರ:ಯತಾಸ್ಥಿತಿ ಮುಂದುವರಿಕೆಗೆ ಎಬಿಜಿಪಿ ಆಗ್ರಹ

Spread the love

ಮೈಸೂರು: ಸರ್ಕಾರಿ ಆಸ್ಪತ್ರೆ ಆವರಣದ ಜನೌಷಧಿ ಕೇಂದ್ರದ ಮಳಿಗೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿರುವುದನ್ನು ತಕ್ಷಣ ಹಿಂಪಡಿಯುವಂತೆ ಸರ್ಕಾರವನ್ನು ಎಬಿಜಿಪಿ ಒತ್ತಾಯಿಸಿದೆ.

ನಗರದ ಚಾಮುಂಡಿಪುರಂನಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ನಡೆದ ಗ್ರಾಹಕರ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಸರ್ಕಾರಿ ಆಸ್ಪತ್ರೆ ಆವರಣದ ಜನೌಷಧಿ ಕೇಂದ್ರ ಮಳಿಗೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿರುವ ಸರ್ಕಾರದ ಆದೇಶವನ್ನು ಹಿಂಪಡಿಯುವಂತೆ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲು ನಿರ್ಧರಿಸಲಾಯಿತು.

ಈ ವೇಳೆ ಮಾತನಾಡಿದ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಅಧ್ಯಕ್ಷರಾದ
ಸಿ ಎಸ್ ಚಂದ್ರಶೇಖರ್,ಉಲ್ಲೇಖಿತ ಸರ್ಕಾರಿ ಆದೇಶದಲ್ಲಿ, ಸರ್ಕಾರಿ ಆಸ್ಪತ್ರೆ ಆವರಣದ ಜನೌಷಧಿ ಕೇಂದ್ರ ಮಳಿಗೆಗಳನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಆದೇಶಿಸಲಾಗಿದೆ. ಜನೌಷಧಿ ಕಡುಬಡವ ಹಾಗೂ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಲಭ್ಯವಾಗುವ ದಿವ್ಯ ಔಷಧಿಯ ಸಂಜೀವಿನಿಯಾಗಿವೆ ಎಂದು ಹೇಳಿದರು.

ಆದರೆ, ಜನೌಷಧಿ ಕೇಂದ್ರ ಮಳಿಗೆಗಳನ್ನು ಸರ್ಕಾರಿ ಆಸ್ಪತ್ರೆಯ ಆವರಣದಿಂದ ಸ್ಥಗಿತಗೊಳಿಸಲು ಆದೇಶಿಸಿಸಿರುವುದು ರಾಜ್ಯ ಸರ್ಕಾರ ಯಾರದೋ ಹಿತಾಸಕ್ತಿಗಳನ್ನು ಸಂತೃಪ್ತಿಗೊಳಿಸಲು ತೆಗೆದುಕೊಂಡಿರುವ ಕ್ರಮವಾಗಿದೆ.ಜನ ಸಾಮಾನ್ಯರಿಗೆ ಲಭ್ಯವಾಗುತ್ತಿದ್ದ ಜನೌಷಧಿಗಳು ಯಥಾ ರೀತಿ ದೊರೆಯುವಂತೆ ಮಾಡಲು ಸರ್ಕಾರದ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರಂಭಿಸಿರುವ ಪಿಎಂಬಿಜೆಪಿ ಯೋಜನೆಯಡಿ ಜನೌಷಧಿ ಕೇಂದ್ರ ಮಳಿಗೆಗಳನ್ನು ತೆರೆಯಲಾಗಿದೆ.

ಜನೌಷಧಿ ಕೇಂದ್ರ ಮಳಿಗೆಗಳಲ್ಲಿ ಶೇ.70ರಿಂದ ಶೇ.90%ರಷ್ಟು ಕಡಿಮೆ ಬೆಲೆಯಲ್ಲಿ ಜನರಿಕ್ ಔಷಧಿಗಳು ಲಭ್ಯವಾಗುತ್ತಿದ್ದು, ಬಡವರ ಔಷಧೀಯ ಸಂಜೀವಿನಿಯಾಗಿವೆ.

ಇದರಿಂದ ಸಾರ್ವಜನಿಕರಿಗೆ ಔಷಧೋಪಚಾರಗಳ ವೆಚ್ಚ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಿ ಆರೋಗ್ಯವನ್ನು ಸುಧಾರಿಸಿಕೊಳ್ಳಲು ದಾರಿ ದೀಪವಾಗಿವೆ.

ಸರ್ಕಾರದ ಜನೌಷಧಿ ಕೇಂದ್ರ ಮಳಿಗೆಗಳನ್ನು ಸರ್ಕಾರಿ ಆಸ್ಪತ್ರೆ ಆವರಣದಿಂದ ಸ್ಥಗಿತಗೊಳಿಸಲು ಆದೇಶಿಸಿರುವುದು ಜನಸಾಮಾನ್ಯರಿಗೆ ತೊಂದರೆಯಾಗಲೇಬೇಕೆಂಬ ಉದ್ದೇಶದಿಂದ ಹೊರಡಿಸಿರುವ ಆದೇಶವಾಗಿರುತ್ತದೆ. ಆದ್ದರಿಂದ,ಕೂಡಲೇ ಸರ್ಕಾರ ಆದೇಶವನ್ನು ಹಿಂಪಡೆದು ಯಥಾರೀತಿ ಮುಂದುವರೆಸಬೇಕೆಂದು ಚಂದ್ರಶೇಖರ್ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್,ಅಜಯ್ ಶಾಸ್ತ್ರಿ, ಆನಂದ್, ರಾಮಚಂದ್ರ,ಹರ್ಷ, ಕೀರ್ತಿ,ನಿತಿನ್ ಅರಸ್, ಕಾರ್ತಿಕ್, ಶ್ರೀಕಾಂತ್ ಕಶ್ಯಪ್, ಜತ್ತಿ ಪ್ರಸಾದ್, ಕಾರ್ತಿಕ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.