(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಶಿವಮೊಗ್ಗ ಹಾಗೂ ಬೀದರ್ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕೊಳ್ಳೇಗಾಲ ತಾಲೂಕು ಬ್ರಾಹ್ಮಣ ಸಭಾದವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೊಳ್ಳೇಗಾಲ ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಶೇಖರ್ ಶಾಸ್ತ್ರಿ ನೇತೃತ್ವದಲ್ಲಿ ಸಂಘಟನೆಗೊಂಡ ಪ್ರತಿಭಟನಾಕಾರರು ಪಟ್ಟಣದ ಡಾ.ರಾಜಕುಮಾರ್ ಡಾ. ಬಿ. ಆರ್. ಅಂಬೇಡ್ಕರ್ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು.

ನಂತರ ಡಾ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಾಲೂಕು ಕಚೇರಿ ತಲುಪಿ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶೇಖರ್ ಶಾಸ್ತ್ರಿಅವರು ರಾಜ್ಯದ ಬೀದರ್ ಶಿವಮೊಗ್ಗ ದಾವಣಗೆರೆ ಜಿಲ್ಲೆಗಳಲ್ಲಿ ವಿಪ್ರ ಪರೀಕ್ಷಾರ್ಥಿಗಳ ಮೇಲೆ ನಡೆದ ದೌರ್ಜನ್ಯವನ್ನು ತಾಲೂಕು ಬ್ರಾಹ್ಮಣ ಸಭಾ ಖಂಡಿಸುತ್ತದೆ ಎಂದು ಹೇಳಿದರು.
ಮಾನವನ 16 ಸಂಸ್ಕಾರಗಳು ಜನಿವಾರದಲ್ಲಿ ಅಡಗಿರುತ್ತವೆ. ಜನಿವಾರ ಹಾಕಿದರೆ ಎರಡನೇ ಜನ್ಮವನ್ನು ಪಡೆದಂತೆ, ಗಾಯತ್ರಿ ಮಾತೆಯ ಔಪಾಸನೆ ಮಾಡುವುದು ಜನಿವಾರ. ಜನಿವಾರ ಬ್ರಾಹ್ಮಣರ ಲಾಂಛನ. ಈ ಲಾಂಛನ ಇನ್ನಿತರ ಸಮುದಾಯಗಳಾದ ಕ್ಷತ್ರಿಯರು, ವೈಶ್ಯರು, ವಿಶ್ವಕರ್ಮರಿಗೂ ಇದೆ. ಈ ಭಾಗದಲ್ಲಿ ಸಿದ್ದಪ್ಪಾಜಿ, ಮಂಟೇಸ್ವಾಮಿ ನೀಲಗಾರರು ಹಾಗೂ ಮಲೆ ಮಹದೇಶ್ವರ ಹಾಗೂ ಪಾರ್ವತಿ ದೇವರ ಗುಡ್ಡರುಗಳು ಮಣಿದಾರಣೆ ಮಾಡಿಸಿಕೊಳ್ಳುತ್ತಾರೆ. ಅದೇ ರೀತಿ ಬ್ರಾಹ್ಮಣರು ಜನಿವಾರ ಧರಿಸುತ್ತಾರೆ ಎಂದು ಹೇಳಿದರು.

ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಪ್ರತಿಯೊಬ್ಬರು ಒಂದೊಂದು ಸಂಸ್ಕೃತಿ ಸಂಸ್ಕಾರವನ್ನು ಅಳವಡಿಸಿಕೊಂಡಿದ್ದಾರೆ. ಪರೀಕ್ಷೆಯ ಸಮಯದಲ್ಲಿ ಬ್ರಾಹ್ಮಣರಾದ ನಮಗೆ ನಮ್ಮದೇ ಸಂಸ್ಕಾರ ಇರುತ್ತದೆ ಸಿಇಟಿ ಪರೀಕ್ಷೆ ಕೇಂದ್ರಗಳಲ್ಲಿ ಹಿಂದೂ ಸಮಾಜದ ಶ್ರದ್ಧೆಯ ಜನಿವಾರವನ್ನು ವಿದ್ಯಾರ್ಥಿಗಳಿಂದ ತೆಗೆಸಿ ಕಸದ ಬುಟ್ಟಿಗೆ ಎಸೆಯುವುದರ ಮೂಲಕ ಕ್ರೌರ್ಯ ಮೆರೆದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಶಿವಮೊಗ್ಗದಲ್ಲಿ ಜನಿವಾರಕ್ಕೆ ಅಪಮಾನ ಮಾಡಿರುವ ವಿಚಾರ ಸಮಾಜದಲ್ಲಿ ಅರ್ಚಕ ಪೌರೋಹಿತ್ಯ ವೃತ್ತಿ ಮೇಲೆ ಅವಲಂಭಿತವಾಗಿರುವ ಬ್ರಾಹ್ಮಣರಿಗೆ ಮಾಡಿರುವ ಅಪಮಾನ. ಹಾಗಾಗಿ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಸಮಾಜದಲ್ಲಿ ಶಾಂತಿ ಕದಡುವ ದುಷ್ಕೃತ್ಯಕ್ಕೆ ಕಾರಣರಾಗುವ ಕಿಡಿಗೇಡಿಗಳಿಗೆ ಇದೊಂದು ಎಚ್ಚರಿಕೆಯ ಪಾಠವಾಗಬೇಕು ಎಂದು ಹೇಳಿದರು.
ಸಂವಿಧಾನದಲ್ಲಿ ಎಲ್ಲಾ ಧರ್ಮ, ಜನಾಂಗದ ಆಚರಣೆಗೂ ಮುಕ್ತ ಅವಕಾಶವಿದೆ. ಆದರೆ ಯಾರಿಗೂ ಅನ್ಯಾಯ ತೇಜೋವಧೆ ಮಾಡುವ ಹಕ್ಕಿಲ್ಲ, ಹಾಗಾಗಿ ಜನಿವಾರವನ್ನ ತುಂಡರಿಸಿರುವ ವಿಚಾರ ಕೋಟ್ಯಾಂಟರ ಬ್ರಾಹ್ಮಣ ಸಮುದಾಯದವರ ಭಾವನೆಗೆ ಧಕ್ಕೆ ಉಂಟಾಗಿದ್ದು ರಾಜ್ಯ ಸರ್ಕಾರ ಸೂಕ್ತ ಕ್ರಮಕೈಗೊಂಡು ಲೋಪ ಮಾಡಿರುವ ಸರ್ಕಾರಿ ನೌಕರರನ್ನ ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ತುಂಬ ಬೇಕಾದ ಅಧಿಕಾರಿಗಳು ಕೇವಲ ದುರುದ್ದೇಶ ಪೂರ್ವಕವಾಗಿ ಕಾನೂನಿನಲ್ಲಿ ಇಲ್ಲದಿದ್ದರೂ ಪರೀಕ್ಷೆ ಕೇಂದ್ರದಲ್ಲಿ ಜನಿವಾರವನ್ನು ತೆಗೆಸಿ ಮಾನಸಿಕವಾಗಿ ಕಿರುಕುಳ ನೀಡಿ ಜಾತಿ ನಿಂದನೆಯನ್ನು ಮಾಡಿದ್ದಾರೆ. ಪರೀಕ್ಷೆ ಕೇಂದ್ರದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕು. ಇನ್ನು ಮುಂದೆ ಇಂತಹ ಘಟನೆ ಮರುಕಳಿಸಬಾರದು ಅಂತಹ ಕ್ರಮ ಕೈಗೊಳ್ಳಬೇಕು ಎಂದು ಶೇಖರ್ ಶಾಸ್ತ್ರಿಆಗ್ರಹಿಸಿದರು.
ಸಿಇಟಿ ಪರೀಕ್ಷಾ ವಂಚಿತ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ವಾಗ್ದೇವಿ ವಿಕ್ರಮ ಮಹಿಳಾ ಸಂಘದ ಅಧ್ಯಕ್ಷೆ ನಿರ್ಮಲ ಮಾತನಾಡಿ ಹುಟ್ಟಿದಾಗ ಹಾಕಿ ಸತ್ತಾಗ ತೆಗೆದು ಹಾಕ ಬೇಕಾದ ಜನಿವಾರವನ್ನು ಈಗಲೇ ಕಸದ ಬುಟ್ಟಿಯಲ್ಲಿ ಹಾಕಿರುವುದು ಖಂಡನೀಯ ಎಂದರು.
ನಂತರ ಉಪ ವಿಭಾಗಾಧಿಕಾರಿಗಳ ಮುಖೇನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಉಪ ತಹಸಿದ್ದಾರ್ ಕೃಪಾಕರ್ ರವರು ಮನವಿ ಸ್ವೀಕರಿಸಿ ಮಾತನಾಡಿ ಸರ್ಕಾರಕ್ಕೆ ಕಳುಹಿಸಿ ಕೊಡುವುದಾಗಿ ಭರವಸೆ ನೀಡಿದರು ನಂತರ ಪ್ರತಿಭಟನೆ ಕೈ ಬಿಡಲಾಯಿತು

ಪ್ರತಿಭಟನೆಯಲ್ಲಿ ವಾಗ್ದೇವಿ ವಿಕ್ರಮ ಮಹಿಳಾ ಸಂಘದ ಪದಾಧಿಕಾರಿಗಳು, ಯಳಂದೂರು ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ರಂಗನಾಥ್ ಕಾರ್ಯದರ್ಶಿ ಚಂದ್ರಚೂಡ್, ವಕೀಲರಾದ ರಾಧಾಕೃಷ್ಣ ಮುಖಂಡರುಗಳಾದ ಮಂಜುನಾಥ್, ಉದಯಕುಮಾರ್, ವೆಂಕಟೇಶ್, ಶ್ರೀಧರ್ ಸುಬ್ರಹ್ಮಣ್ಯ ನಂದಕುಮಾರ್ ನಾಗೇಂದ್ರ ಭಟ್ ಮಾಧವನ್ ಪಾಂಡು ಶ್ರೀಧರ್ ನರಸಿಂಹನ್ ರವೀಂದ್ರನಾಥ್ ಸೇರಿದಂತೆ ಹಲವರು ಮುಖಂಡರುಗಳು ಭಾಗವಹಿಸಿದ್ದರು.