ಮೈಸೂರು: ಜನಿವಾರ ಕತ್ತರಿಸಿದ ಪ್ರಕರಣ ಖಂಡಿಸಿ ಶ್ರೀರಾಮಚಂದ್ರಾಪುರ ಮಠದ ಮೈಸೂರು ವಲಯ ಹವ್ಯಕ ಮಹಾಮಂಡಲದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಾಮಾನ್ಯ ಪ್ರವೇಶ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ/ಕತ್ತರಿಸಿದ ಪ್ರಸಂಗ ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ನಡೆದಿದೆ.
ಅಧಿಕಾರಿಗಳ ಈ ದುಷ್ಟಕ್ರಮವನ್ನು ಖಂಡಿಸಿ, ಶ್ರೀರಾಮಚಂದ್ರಾಪುರ ಮಠದ ಮೈಸೂರು ವಲಯ ಹವ್ಯಕ ಮಹಾಮಂಡಲದ ವತಿಯಿಂದ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಸಿಎಂಗೆ ಮನವಿ ಮಾಡಲಾಯಿತು.
ಜನಿವಾರ ತೆಗೆಸಿರುವುದರ ಹಿಂದೆ ಹಿಂದೂ ವಿರೋಧಿ ಮನಸ್ಥಿತಿ, ಅದರಲ್ಲಿಯೂ ಬ್ರಾಹ್ಮಣರನ್ನು ಜಾತಿ ಆಧಾರಿತವಾಗಿ ದ್ವೇಷಿಸುವ ಅಪಮಾನ ಮಾಡುವ ಉದ್ದೇಶವಿದೆ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ರಾಜ್ಯ ಸರ್ಕಾರ ಈಗ ಕೆಲವರ ಮೇಲೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ, ಆದರೆ ಈ ಅಧಿಕಾರಿಗಳಿಗೆ ಈ ರೀತಿ ನಿರ್ದೇಶನ ನೀಡಿದವರು ಯಾರು ಎಂಬುದು ಸಾರ್ವಜನಿಕರಿಗೆ ತಿಳಿಯಬೇಕಿದೆ. ಅವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಆಗ್ರಹಿಸಲಾಗಿದೆ.
ಭಾರತ ದೇಶ ತನ್ನದೇ ಸಂವಿಧಾನ ಹೊಂದಿದೆ, ಇಲ್ಲಿ ಎಲ್ಲರೂ ಸಮಾನರು. ಜನಿವಾರ, ಮಾಂಗಲ್ಯ, ಕುಂಕುಮ ಧರಿಸುವುದು ಒಂದು ಧಾರ್ಮಿಕ ಆಚರಣೆ, ಸಂವಿಧಾನ ದತ್ತ ಹಕ್ಕು ಎಂಬುದನ್ನು ಬ್ರಾಹ್ಮಣರನ್ನು ಕೇವಲ ಜಾತಿ ಆಧಾರಿತವಾಗಿ ದ್ವೇಷಿಸುವ ಜನ ಅರಿಯಬೇಕಿದೆ.
ವರ್ಷ ಪೂರ್ತಿ ಶ್ರಮಿಸಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳೆ ಅಪಮಾನ ಮಾಡಿ ಮಾನಸಿಕ ಹಿಂಸೆ ನೀಡಲಾಗಿದೆ. ರಾಜ್ಯ ಸರ್ಕಾರ ದೃಢ ಕಠಿಣ ನಿಲುವಿನ ಮೂಲಕ ತನ್ನ ಧೋರಣೆ ಪ್ರದರ್ಶನ ಮಾಡಿದಾಗ ಮತ್ತೆ ಯಾವುದೇ ಅಧಿಕಾರಿಗಳು ಜಾತಿ ಆಧಾರಿತವಾಗಿ ವಿದ್ಯಾರ್ಥಿಗಳನ್ನು ಶೋಷಣೆ ಮಾಡಲು ಮುಂದಾಗುವುದಿಲ್ಲ. ಅಂತಹ ಕ್ರಮ ಕೈಗೊಳ್ಳಬೇಕು ಮತ್ತು ಅನ್ಯಾಯ ಸರಿಪಡಿಸಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ನಂ. ಶ್ರೀಕಂಠ ಕುಮಾರ್, ಹವ್ಯಕ ಮಹಾಮಂಡಲದ ಮೈಸೂರು ವಲಯದ ಉಪಾಧ್ಯಕ್ಷರಾದ ಶಂಕರನಾರಾಯಣ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್, ಸಂಘಟನಾ ಕಾರ್ಯದರ್ಶಿ ಸಂಪ ಕೃಷ್ಣಮೂರ್ತಿ, ಹಿರಿಯ ಮುಖಂಡರಾದ ಬೇತ ಕೃಷ್ಣ ಭಟ್, ಕೃಷ್ಣ ಹೆಗಡೆ, ಗಿರಿಜಾ ಶಂಕರ್, ವಿಜ್ಞೆಶ್ವರ ಭಟ್, ನಾಗರಾಜ್ ಹೆಗಡೆ, ಹಿರಿಯಣ್ಣ, ಶ್ರೀನಿವಾಸ್ ಪ್ರಸಾದ್, ರಾಘವೇಂದ್ರ, ಸಂಜಯ್ ಪ್ರಸನ್ನ, ನಾರಾಯಣ ಶರ್ಮಾ, ಕೊಕ್ಕಡ ವೆಂಕಟರಮಣ ಭಟ್, ಮಾತೃ ಪ್ರಧಾನರಾದ ಶ್ರೀಕಲಾ, ಸುಜಾತ, ಹೇಮಲತಾ, ರಾಧಾ ಮುತಾಲಿಕ್, ಅನುಪಮಾ, ಬಾಲಕೃಷ್ಣ, ಗಣಪತಿ, ಶ್ರೀಧರ ಹೆಗಡೆ, ವಿಕಾಸ್, ಗಣೇಶ್ ಮನವಿ ಸಲ್ಲಿಕೆ ವೇಳೆ ಹಾಜರಿದ್ದರು.