ಆಧುನಿಕ ಜೀವನದತ್ತ ಯುವ ಸಮಾಜ; ನಲುಗುತ್ತಿದೆ ಜನಪದ-ಸಿ. ಸೋಮಶೇಖರ್

Spread the love

ಬೆಂಗಳೂರು: ಆಧುನಿಕ ಜೀವನದತ್ತ ನಮ್ಮ ಯುವ ಸಮಾಜ ಮುಖ ಮಾಡಿರುವುದರಿಂದ ಜನಪದ ನಲುಗಿ ಹೋಗುತ್ತಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಆತಂಕ‌ ವ್ಯಕ್ತಪಡಿಸಿದರು.

ಡಾ.ಸಿ.ಸೋಮಶೇಖರ್ ಅವರು ಜೂನ್ 25 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಪ್ರಪ್ರಥಮ ರಾಜ್ಯ ಕನ್ನಡ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರೂ ಆಗಿದ್ದಾರೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾನಪದ ಸಂಸ್ಕೃತಿ ಎಲ್ಲಾ ಸಂಸ್ಕೃತಿಗಳ ಮೂಲ ಸಂಸ್ಕೃತಿ, ಜಾನಪದ ದೇಶ ಸಂಸ್ಕೃತಿಯ ಮೂಲ ಬೇರು. ಆದರೆ ಆಧುನಿಕ ಜೀವನದತ್ತ ನಮ್ಮ ಯುವ ಸಮಾಜ ಮುಖ ಮಾಡಿರುವುದರಿಂದ ಜನಪದ ನಲುಗಿ ಹೋಗುತ್ತಿದೆ ಎಂದು ಬೇಸರಪಟ್ಟರು.

ಇಂದಿನ ಅವಶ್ಯಕತೆ‌ ಗಳಿಗನುಗುಣವಾಗಿ ಜಾಗತೀಕರಣ ಆಯ್ದುಕೊಳ್ಳುವ ಬಗೆಗೆ ಆಕ್ಷೇಪಣೆಗಳು ಇಲ್ಲದಿದ್ದರೂ ಅದು ಮಾನವನ ಜೀವನ ಶೈಲಿಯನ್ನೇ ಬದಲಿಸುತ್ತಿರುವುದು ನಿಜಕ್ಕೂ ಆತಂಕಕಾರಿ ಎಂದು ಅಭಿಪ್ರಾಯ ಪಟ್ಟರು.

ಅದು ಒಂದು ರೀತಿಯಲ್ಲಿ ದೇಶದ ಜೀವನ ಶೈಲಿಗೆ ಧಕ್ಕೆ ಆಗದಂತೆ ಬಳಕೆಯಾಗಬೇಕು, ನಾವೆಲ್ಲರೂ ಜಾನಪದ ಪ್ರಜ್ಞೆ ಮತ್ತು ಪರಿಸರ ಪ್ರಜ್ಞೆಗಳನ್ನು ಬೆಳೆಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಮಾತನಾಡಿ, ಮಾನವೀಯತೆ, ಹೃದಯ ವೈಶಾಲ್ಯತೆ ಇಂದು ಕುಂಠಿತಗೊಂಡು ಸ್ವಾರ್ಥ ಲಾಲಸೆಗಳು ಮೇಳೈಸುತ್ತಿವೆ. ಹೀಗಾಗಿ ಕಲೆ, ಸಂಸ್ಕೃತಿಗಳ ಬಗೆಗಿನ ಆಸಕ್ತಿ ಕಡಿಮೆ ಯಾಗಿದೆ ಎಂದು ಹೇಳಿದರು.

ಕಲೆ, ಕಲಾವಿದರಿಗೆ ಗೌರವ ವಿರುವಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಯೊಡನೆ ಮಾನವೀಯತೆ ಭದ್ರವಾಗಿರುತ್ತದೆ. ಅಲ್ಲದೆ ದೇಶದ ಅಮೂಲ್ಯ ಸೊತ್ತು ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು.

ಜೂನ್ 25 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕನ್ನಡ ಜಾನಪದ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ರ ನರಸಿಂಹಮೂರ್ತಿ ಮಾತನಾಡಿ ಯುವ ಸಮೂಹಕ್ಕೆ ನಮ್ಮ ಕಲೆ, ಜಾನಪದಗಳನ್ನು ಕಲಿಸುವ, ಅರಿವು ಮೂಡಿಸುವ ಪ್ರಕ್ರಿಯೆಗಳು ಕ್ರಿಯಾತ್ಮಕವಾಗಿ ನಡೆಯಬೇಕಿದೆ ಎಂದು ತಿಳಿಸಿದರು.

ದಾಖಲೆಗಳಲ್ಲಿ ತೋರಿಸುವುದಕ್ಕಿಂತ ಪ್ರಾಯೋಗಿಕವಾಗಿ ಕಾರ್ಯರೂಪಕ್ಕಿಳಿಸಬೇಕಾದದು ಅವಶ್ಯಕತೆ ಇದೆ. ದೇಶದ ಸಾಂಸ್ಕೃತಿಕ ನೆಲೆ ಉಳಿಯಬೇಕಾದರೆ ಸಂಸ್ಕೃತಿ ಉಳಿಯಬೇಕು. ಸಂಸ್ಕೃತಿಯ ಬೇರುಗಳನ್ನು ರಕ್ಷಿಸಿದರೆ ಮಾತ್ರ ಜಾನಪದ ಕಲೆ ಉಳಿದು ಮೂಲ ಉದ್ದೇಶ ಈಡೇರಿಸಿದಂತಾಗುತ್ತದೆ ಎಂದು ಹೇಳಿದರು.

ಕನ್ನಡ ಜಾನಪದ ಪರಿಷತ್ ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷರಾದ ಡಾ. ರಿಯಾಜ್ ಪಾಷಾ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸವಿತಾ ಎನ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ನೇತ್ರಾವತಿ ಮಂಜುನಾಥ್, ಕೋಶಾಧಿಕಾರಿಯಾಗಿ ಅನಿತಾ, ಪದಾಧಿಕಾರಿಗಳಾಗಿ ವಾಣಿ, ಚೈತ್ರ, ಲಕ್ಷ್ಮೀ, ಲತಾ, ಜ್ಯೋತಿ, ಭಾಗ್ಯ, ಪವಿತ್ರ, ಹೇಮಲತಾ ಮತ್ತಿತರರಿಗೆ ಅಧ್ಯಕ್ಷರಾದ ಡಾ ಜಾನಪದ ಎಸ್ ಬಾಲಾಜಿ ಅವರು ಪದಪತ್ರ ನೀಡಿದರು.

ನಂತರ ಮಹಿಳಾ ಅಧ್ಯಕ್ಷೆ ಸವಿತಾ ಅವರಿಗೆ ಕನ್ನಡ ಜಾನಪದ ಪರಿಷತ್ ಧ್ವಜ ನೀಡಿ ಮಹಿಳಾ ಘಟಕವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ ಕೇಂದ್ರ ಜಿಲ್ಲಾ ಕಾರ್ಯದರ್ಶಿ ರತ್ನಕುಮಾರಿ, ಸವಿತಾ ಮತ್ತು ತಂಡದವರು ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು. ಅಶ್ವಥ್ ನಾರಾಯಣಪ್ಪ ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಸಂಸ್ಕೃತಿ ಸಂಗಮ ಟ್ರಸ್ಟ್ ಅಧ್ಯಕ್ಷೆ ಸರ್ವಮಂಗಳ ಸೋಮಶೇಖರ್, ಇಂದು ಸಂಜೆ ಪತ್ರಿಕೆಯ ಮುಖ್ಯಸ್ಥೆ ಪದ್ಮ ನಾಗರಾಜ್, ಕಜಾಪ ಮಹಾಲಕ್ಷ್ಮೀ ಲೇಔಟ್ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಸತ್ಯಮೂರ್ತಿ, ಕಸಾಪ ಮತ್ತು ಕಜಾಪ ವಿಜಯನಗರ ಘಟಕದ ಅಧ್ಯಕ್ಷ ಉಮೇಶ್ ಚಂದ್ರ, ಬಿಬಿಎಂಪಿ ಮಾಜಿ ಸದಸ್ಯರಾದ ರೂಪಾದೇವಿ, ನಾಗರಬಾವಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಲತಾ, ಗ್ಲೋಬಲ್ ವಿಷ್ಣು ಸಹಸ್ರ ನಾಮ ಸತ್ಸಂಗದ ಅಧ್ಯಕ್ಷೆ ಮಂಗಳಾ ಭಾಸ್ಕರ್, ಕಜಾಪ ರಾಜ್ಯ ಸಂಚಾಲಕಿ ಪೂರ್ಣಿಮಾ ಜೋಗಿ, ಕಜಾಪ ಬೆಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ಪ್ರೊ ಅಂಬಿಕಾ, ವಾರ್ಡ್ ಅಧ್ಯಕ್ಷ ಹನುಮೇಗೌಡರು, ಅಧ್ಯಕ್ಷೆ ವೆಳ್ಳಿಯಮ್ಮ, ಮುಖಂಡರಾದ ದೀಪಕ್ ಕೆಂಪೇಗೌಡ, ಭರತ್, ಮನೋಜ್, ಕನ್ನಡ ಜಾನಪದ ಪರಿಷತ್ತಿನ ಗೋವಿಂದರಾಜನಗರ ಮತ್ತು ರಾಜಾಜಿನಗರ ಘಟಕದ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.