ಸಚಿವ ಜಮೀರ್‌ ವಿರುದ್ಧ ಆರ್‌.ಅಶೋಕ ತೀವ್ರ ವಾಗ್ದಾಳಿ

ಚನ್ನಪಟ್ಟಣ: ಸಚಿವ ಜಮೀರ್‌ ಅಹ್ಮದ್‌ ಅವರು ಒಕ್ಕಲಿಗರನ್ನು ಅಥವಾ ಹಿಂದೂಗಳನ್ನು ಖರೀದಿಸುತ್ತೇನೆ ಎಂದು ಹೇಳುತ್ತಿದ್ದಾರೆಯೇ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಪ್ರಶ್ನಿಸಿದರು.

ಚನ್ನಪಟ್ಟಣ ಉಪಚುನಾವಣೆಯ ಪ್ರಚಾರದ ವೇಳೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಚಾಮರಾಜಪೇಟೆಗೆ ಹೋಗಿ ರ‍್ಯಾಲಿ ಮಾಡಿ ಜಮೀರ್‌ ಅಹ್ಮದ್‌ರನ್ನು ಗೆಲ್ಲಿಸಿ ಅವರಿಗೆ ಜೀವನ ನೀಡಿದ್ದರು. ಅದೇ ಜಮೀರ್‌ ಅಹ್ಮದ್‌ ಈಗ ದೇವೇಗೌಡರ ಕುಟುಂಬವನ್ನು ಖರೀದಿಸುತ್ತೇವೆ ಎಂದು ಹೇಳಿದ್ದಾರೆ ಎಂದು
ಟೀಕಿಸಿದರು.

ದೇಶದ ಮಾಜಿ ಪ್ರಧಾನಿ ದೇವೇಗೌಡರು ಕಾವೇರಿ ನೀರು ಹಂಚಿಕೆಗಾಗಿ ಶ್ರಮಿಸಿದ್ದರು. ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿದ್ದರು. ಅಂತಹವರನ್ನು ಖರೀದಿಸುತ್ತೇನೆ ಎಂದು ಜಮೀರ್‌ ಹೇಳುತ್ತಾರೆ. ಇದು ಒಕ್ಕಲಿಗರನ್ನು ಖರೀದಿಸುತ್ತೇವೆಂದು ಅರ್ಥವೇ ಅಥವಾ ಹಿಂದೂಗಳನ್ನು ಖರೀದಿಸುತ್ತೇವೆಂದು ಅರ್ಥವೇ ಎಂದು ಕಾರವಾಗಿ ಪ್ರಶ್ನಿಸಿದರು.

ಈಗಾಗಲೇ ಸಚಿವ ಜಮೀರ್‌ ಅಹ್ಮದ್‌ ರೈತರ ಜಮೀನು ಕಬಳಿಸುತ್ತಿದ್ದಾರೆ. ಈಗ ದೇವೇಗೌಡರ ಕುಟುಂಬ ಖರೀದಿಸಲು ಇರಾಕ್‌, ಇರಾನ್‌ನಿಂದ ಹಣ ಬಂದಿದೆಯೇ? ನಾವು ಮಣ್ಣಿನ ಮಕ್ಕಳಾಗಿದ್ದು, ಇದೇ ನಾಡಿನಲ್ಲಿ ಹುಟ್ಟಿ ಬೆಳೆದಿದ್ದೇವೆ. ಚುನಾವಣೆ ನಡೆಯುವ ಸಮಯದಲ್ಲೇ ಕಾಂಗ್ರೆಸ್‌ ಸಚಿವರು ಖರೀದಿ ಬಗ್ಗೆ ಮಾತನಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಹಿಂದೆ ಇದ್ದ ರೌಡಿಗಳು ನಾಚುವಂತೆ ಅಬಕಾರಿ ಇಲಾಖೆಯ ಮೂಲಕ ಮದ್ಯ ಮಾರಾಟಗಾರರಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಲೂಟಿ ಮಾಡಿದ ಹಣದಲ್ಲಿ ಕುಟುಂಬ ಖರೀದಿಸುವವರನ್ನು ಚನ್ನಪಟ್ಟಣದ ಜನರು ಕ್ಷಮಿಸುವುದಿಲ್ಲ ಎಂದು ಅಶೋಕ್ ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14 ಸೈಟು ಕೊಳ್ಳೆ ಹೊಡೆದು ಅದಕ್ಕಾಗಿ 62 ಕೋಟಿ ರೂ. ನೀಡಿ ಎಂದು ಕೇಳುತ್ತಾರೆ. ಅವರ ಬದುಕಿನ ತೆರೆದ ಪುಸ್ತಕದಲ್ಲಿ ದರೋಡೆಗಳೇ ತುಂಬಿದೆ ಎಂದು ಲೇವಡಿ ಮಾಡಿದರು.

ಇದನ್ನೆಲ್ಲ ಜನ ಯೋಚನೆ ಮಾಡಿ ಬದಲಾವಣೆ ತರಬೇಕು,ನಿಖಿಲ್‌ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.