ಮೈಸೂರು: ಜಲ ಜೀವನ್ ಮಿಷನ್ ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಸೂಚಿಸಿದರು.
ನಂಜನಗೂಡು ತಾಲ್ಲೂಕಿನ ತಾಂಡವಪುರ, ಸುತ್ತೂರು ,ಹದಿನಾರು ಗ್ರಾಮ ಪಂಚಾಯಿತಿ ಹಾಗೂ ತಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಮೋಳೆ ಗ್ರಾಮ ಹಾಗೂ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಕೆಂಪಯ್ಯನಹುಂಡಿ ಗ್ರಾಮಗಳಿಗೆ ಭೇಟಿ ನೀಡಿ ಯುಕೇಶ್ ಪರಿಶೀಲಿಸಿದರು.

ನಂಜನಗೂಡು ತಾಲೂಕು ತಾಂಡವಪುರ ಮತ್ತು ಇತರೆ 31 ಜನವಸತಿಗಳಿಗೆ ಡಿಬಿಒಟಿ ಆಧಾರಿತ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಪರಿಶೀಲನೆ ನಡೆಸಿ, ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ತಿ. ನರಸೀಪುರ ತಾಲೂಕಿನ ಸೋಸಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಮೋಳೆ ಗ್ರಾಮದ ಅಂಗನವಾಡಿಗೆ ಭೇಟಿ ನೀಡಿ ಮಕ್ಕಳ ಹಾಜರಾತಿ ಪರಿಶೀಲಿಸಿದರು.

ಹಾಗೂ ಗರ್ಭಿಣಿಯರಿಗೆ ನಿಗಧಿತ ಸಮಯದಲ್ಲಿ ಆಹಾರ ಪೂರೈಸಲು ಸೂಚಿಸಿದರು.
ಜೆ.ಜೆ.ಎಂ. ಯೋಜನೆಯ ಅರ್ಥ್ ವರ್ಕಿಂಗ್ ಪರಿಶೀಲಿಸಿ, ಬಳಿಕ ಕೆಲ ಮನೆಗಳಿಗೆ ತೆರಳಿ ಜೆಜೆಎಂ ಯೋಜನೆಯಲ್ಲಿ ಅಳವಡಿಸಲಾಗಿರುವ ನಲ್ಲಿಯಲ್ಲಿ ಬರುವ ನೀರಿನ ತೀವ್ರತೆಯನ್ನು ಪರಿಶೀಲಿಸಿದರು.

ಗ್ರಾಮಗಳಲ್ಲಿ ನೀರಿನ ಟ್ಯಾಂಕ್ ಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸಬೇಕು. ಟ್ಯಾಂಕ್ ಗಳನ್ನು ಸ್ವಚ್ಚ ಮಾಡಿದ ದಿನಾಂಕವನ್ನು ಕಡ್ಡಾಯವಾಗಿ ಗೋಡೆ ಮೇಲೆ ಬರೆಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು.
ಈ ವೇಳೆ ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯ ಪಾಲಕ ಅಭಿಯಂತರರಾದ ರಂಜಿತ್ ಕುಮಾರ್, ಸಹಾಯಕ ಕಾರ್ಯ ಪಾಲಕ ಅಭಿಯಂತರು ಹಾಗೂ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.