ಜೈಶ್-ಎ-ಮೊಹಮ್ಮದ್‌ ಕಮಾಂಡರ್ ಸೈಫುಲ್ಲಾ ಸೇರಿ ಮೂವರು ಭಯೋತ್ಪಾದಕರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್‌ ಕಮಾಂಡರ್ ಸೈಫುಲ್ಲಾ ಸೇರಿದಂತೆ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ.

ಉಗ್ರರ ಒಳನುಸುಳುವಿಕೆ ತಡೆಯಲು ಗುಡ್ಡಗಾಡು ಪ್ರದೇಶಗಳಲ್ಲಿ ಯೋಧರು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಾರ್ಯಾಚರಣೆಯ ಎರಡನೇ ದಿನ ಏ.11ರಂದು ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.

ಭಯೋತ್ಪಾದಕರನ್ನು ಪತ್ತೆಹಚ್ಚುವ ಕಾರ್ಯಾಚರಣೆ ಇಂದೂ ಸಹ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹತ್ಯೆಗೊಳಗಾದ ಭಯೋತ್ಪಾದಕರಲ್ಲಿ ಒಬ್ಬನನ್ನು ಜೈಶ್-ಎ-ಮೊಹಮ್ಮದ್‌‌ ನ ಉನ್ನತ ಕಮಾಂಡರ್ ಸೈಫುಲ್ಲಾ ಎಂದು ಗುರುತಿಸಲಾಗಿದೆ. ಈತ ಹಲವಾರು ತಿಂಗಳುಗಳಿಂದ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಿಶ್ತ್ವಾರ್ ಜಿಲ್ಲೆಯ ಚತ್ರು ಅರಣ್ಯ ಪ್ರದೇಶದಲ್ಲಿ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಉಗ್ರರ ಶೋಧದ ವೇಳೆ ಭದ್ರತಾ ಸಿಬ್ಬಂದಿ ಭಯೋತ್ಪಾದಕರು ಅಡಗಿರುವುದನ್ನು ಪತ್ತೆಹಚ್ಚಿದ್ದರು. ಈ ವೇಳೆ ಎರಡು ಕಡೆಯಿಂದ ಗುಂಡಿನ ದಾಳಿ ನಡೆದಿದೆ.

ಪ್ರತಿಕೂಲ ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನದ ನಡುವೆಯೂ ಸೈನಿಕರು ನಿರಂತರ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.