ಮೈಸೂರು: ಜಾತಿ, ಮತ, ಪಂಥ, ಪಕ್ಷ, ಪ್ರತಿಷ್ಠೆ ಬದಿಗಿಟ್ಟು ಪ್ರಜಾಪ್ರಭುತ್ವದ ದಿನವನ್ನು ಸಾರ್ಕಾರ ಸೆ.15 ರಂದು ವಿಭಿನ್ನವಾಗಿ ಆಚರಿಸುತ್ತಿರುವ ಮಾನವ ಸರಪಳಿಯನ್ನು ಯಶಸ್ವಿಗೊಳಿಸಬೇಕು ಎಂದು ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು ಮನವಿ ಮಾಡಿದ್ದಾರೆ.
ಅನುಭವ ಮಂಟಪದ ಮೂಲಕ ಇಡೀ ವಿಶ್ವಕ್ಕೆ ಮೊಟ್ಟಮೊದಲ ಬಾರಿಗೆ ಸಂಸತ್ತು, ಪ್ರಜಾಪ್ರಭುತ್ವದ ಮಾದರಿ ಪರಿಚಯಿಸಿದ್ದು ನಮ್ಮ ಕಲ್ಯಾಣ ನಾಡಿನ ಬಸವಾದಿ ಶರಣರು. ಈ ವಿಷಯ ಮುನ್ನೆಲೆಗೆ ತರಲು ಬಸವಾದಿ ಶರಣರು ಸ್ಥಾಪಿತ ಬಸವ ಕಲ್ಯಾಣದಲ್ಲಿನ ಅನುಭವ ಮಂಟಪದಿಂದಲೇ ಈ ಮಾನವ ಸರಪಳಿ ಆರಂಭವಾಗಲಿದೆ.
ನಂತರ ರಾಜ್ಯದ ಎಲ್ಲ ಜಿಲ್ಲೆಗಳನ್ನು ಒಳಗೊಂಡು ಚಾಮರಾಜನಗರದಲ್ಲಿ ಮುಕ್ತಾಯಗೊಳ್ಳಲಿದೆ. ಪ್ರಜಾಪ್ರಭುತ್ವದ, ಸಂವಿಧಾನದ ಮಹತ್ವ ಸಾರುವ ಈ ವಿನೂತನ ಮಾನವ ಸರಪಳಿ ರಾಜ್ಯದಲ್ಲಿ ಮಾತ್ರ ಆಯೋಜಿಸಿದ್ದು,ಇದನ್ನು ರಾಜ್ಯದ ಪ್ರತಿಯೊಬ್ಬ ನಾಗರಿಕರು ಬೆಂಬಲಿಸಬೇಕು ಎಂದು ಚೇತನ್ ಕಾಂತರಾಜು ಕೋರಿದ್ದಾರೆ.