ಬೆಂಗಳೂರು: ಐಶ್ವರ್ಯ ಗೌಡ ಎಂಬಾಕೆ ಯಾವಾಗ, ಎಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಅನಿತಾ ಅವರನ್ನು ಭೇಟಿ ಮಾಡಿದ್ದಾರೆಂಬ ಮಾಹಿತಿ ಕೊಟ್ಟರೆ ಒಳಿತು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಐಶ್ವರ್ಯ ಗೌಡ ಕೇಸ್ ನಲ್ಲಿ ನಿಖಿಲ್, ಅನಿತಾ ಕುಮಾರಸ್ವಾಮಿ ಅವರ ಹೆಸರುಗಳು ಪ್ರಸ್ತಾಪವಾಗಿವೆ. ಇದರ ಹಿಂದೆ ಯಾರ ಕೈಗಳಿವೆ ಎನ್ನುವುದು ಗೊತ್ತಾಗುತ್ತದೆ. ಈಗ ರಾಜ್ಯದಲ್ಲಿ ಚಿನ್ನ, ಬೆಳ್ಳಿ ಕೇಸ್ ನಲ್ಲಿ ಅವರ ಹೆಸರುಗಳನ್ನು ಎಳೆದು ತರಲಾಗುತ್ತಿದೆ ಎಂದು ದೂರಿದರು.
ಆದರೆ ಐಶ್ವರ್ಯ ಗೌಡ ಎಂಬ ಮಹಿಳೆ ಇವರಿಬ್ಬರನ್ನು ಯಾವಾಗ ಭೇಟಿ ಮಾಡಿದ್ದರು, ಈ ಸರಕಾರದಲ್ಲಿ ಎಷ್ಟರ ಮಟ್ಟಿಗೆ ತನಿಖೆ ನಡೆಯುತ್ತಿದೆ ಎನ್ನುವುದು ಗೊತ್ತಿದೆ. ಮಾಧ್ಯಮಗಳಲ್ಲಿ ಈ ವಿಷಯ ಬಂದ ಮೇಲೆ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಕೇಸ್ ಹಿನ್ನಲೆ ತಿಳಿದಿಕೊಂಡಿದ್ದೇನೆ ಎಂದು ಹೆಚ್ ಡಿ ಕೆ ತಿಳಿಸಿದರು.
ಘಟನೆ ನಡೆದಿದ್ದು 2016-2019ರಲ್ಲಂತೆ, ದೂರು ಸ್ವೀಕರಿಸುವುದು ಈಗ, ಈ ಸರಕಾರ ಯಾರನ್ನು ಯಾವಾಗ ಏನು ಬೇಕಾದರೂ ಮಾಡುತ್ತದೆ. ಸರಕಾರದಲ್ಲಿ ಅಧಿಕಾರ ವರ್ಗವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ ಎಂದು ಟೀಕಿಸಿದರು.
2016ರಲ್ಲಿ ಪ್ರಕರಣ ನಡೆದಿದೆ ಎಂದು 2024ರಲ್ಲಿ ದೂರು ಕೊಡುತ್ತಾರೆ. 2018ರಲ್ಲಿ ನಾನೇ ಸಿಎಂ ಆಗಿದ್ದೆ. ಆಗ ಯಾಕೆ ನನ್ನ ಬಳಿ ದೂರುದಾರರು ಬರಲಿಲ್ಲ, ಪೊಲೀಸರಿಗೆ ಯಾಕೆ ದೂರು ನೀಡಲಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ನಿಖಿಲ್ ಮತ್ತು ಅನಿತಾ ಇಬ್ಬರೂ ಇವರ ಮುಖಗಳನ್ನೇ ನೊಡಿಲ್ಲ. ಹೇಗೆ ಅವರ ಪರಿಚಯ ಅಂತ ಸುದ್ದಿ ಮಾಡಿಸ್ತಾ ಇದ್ದಾರೆ ಇವರು, ಇದರ ಹಿಂದೆ ಯಾರಿದ್ದಾರೆ, ನನ್ನ ಮಗ, ಪತ್ನಿಯನ್ನು ಯಾಕೆ ಈ ಪ್ರಕರಣದಲ್ಲಿ ಎಳೆದು ತಂದಿದ್ದಾರೆ, ಇದನ್ನು ಸರಕಾರ ಎಂದು ಕರೆಯಲು ಸಾಧ್ಯವೇ ಎಂದು ವಾಗ್ದಾಳಿ ನಡೆಸಿದರು.
ಸದ್ಯಕ್ಕೆ ನಾನು ಯಾವುದಕ್ಕೂ ಟೀಕೆ ಮಾಡುವುದಿಲ್ಲ. ಟೀಕೆ ಮಾಡಿ ಏನ್ ಮಾಡೋದು,ಕೇಳೋದಕೆ ಯಾರು ಇದ್ದಾರೆ ಇಲ್ಲಿ, ರಾಜ್ಯದಲ್ಲಿ ಸರಕಾರವೇ ಇಲ್ಲ. ಸ್ವೇಚ್ಚಾಚ್ಚಾರವಾಗಿ ಆಡಳಿತ ನಡೆಸುತ್ತಿದ್ದಾರೆ. ಇವರಿಗೆ ಹೇಳೋರು ಕೇಳೋರು ಯಾರು ಇಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸರಕಾರ ಬಂದ ಮೇಲೆ ಎಷ್ಟು ಆತ್ಮಹತ್ಯೆಗಳು ನಡೆದವು, ಯಾಕೆ ಇಷ್ಟು ಆತ್ಮಹತ್ಯೆಗಳು ಆಗುತ್ತಿವೆ, ಜೀವ ಕಳೆದುಕೊಂಡ ನತದೃಷ್ಟರು ಮರಣಪತ್ರದಲ್ಲಿ ಏನೆಲ್ಲಾ ಬರೆದಿದ್ದಾರೆ, ಯಾರ ಯಾರ ಹೆಸರುಗಳನ್ನು ಉಲ್ಲೇಖ ಮಾಡುತ್ತಿದ್ದಾರೆ, ಮಂತ್ರಿಗಳ ಮೇಲೆ ಆರೋಪ ಬಂದರೂ ಸತ್ಯಾಂಶ ಹೊರಗೆ ಬರುತ್ತಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಅವನ್ಯಾರೋ ರಮೇಶ್ ಗೌಡ ಅಲ್ಲೆಲ್ಲೋ ಊಟಕ್ಕೆ ಕೂತಿದ್ದನಂತೆ. ಕುಮಾರಸ್ವಾಮಿಗೆ ಫೋನ್ ಮಾಡಿಕೊಟ್ಟನಂತೆ. ಕುಮಾರಸ್ವಾಮಿ 50 ಕೋಟಿ ಕೇಳಿದ್ನಂತೆ, ಅದಕ್ಕೊಂದು ಕುಮಾರಸ್ವಾಮಿ ಮೇಲೆ ಕಂಪ್ಲೆಂಟ್, ಇದರಲ್ಲಿ ಅರ್ಥ ಏನಿದೆ, ಸಂಕ್ರಾಂತಿ ಕಳಿಯಲಿ ಎಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಮುಗಿಸಬೇಕು ಎಂದು 12 ಜನ ಶಾಸಕರನ್ನು ಕರೆದುಕೊಂಡು ಬನ್ನಿ, 13 ಜನರನ್ನು ಕರೆದುಕೊಂಡು ಬನ್ನಿ ಎನ್ನುವ ಷಡ್ಯಂತ್ರ ನಡೆಯುತ್ತಿದೆ. ಇದೆಲ್ಲವೂ ನನಗೆ ಗೊತ್ತಿದೆ. ನಮ್ಮ ಯಾವ ಶಾಸಕರು ಪಕ್ಷ ಬಿಟ್ಟು ಹೋಗುವ ಪರಿಸ್ಥಿತಿ ಇಲ್ಲ. ಕಾಂಗ್ರೆಸ್ ನವರು ಏನೇನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಕಾಂಗ್ರೆಸ್ಸಿನವರ ಪಾಪದ ಕೊಡ ತುಂಬಿದೆ. ದೇವರೇ ಅವರಿಗೆ ಶಿಕ್ಷೆ ಕೊಡುತ್ತಾನೆ ಎಂದು ಹೇಳಿದರು.
ನಾನು ಕಾಂಗ್ರೆಸ್ ಶಾಸಕರಿಗೆ ಮನವಿ ಮಾಡುವುದು ಇಷ್ಟೇ,ನಿಮ್ಮೆಲ್ಲರಿಗೂ ಆತ್ಮಸಾಕ್ಷಿ ಎನ್ನುವುದು ಇದ್ದರೆ ನಿಮ್ಮ ಪಕ್ಷದ ಸರಕಾರ ಹೋಗುತ್ತಿರುವ ಮಾರ್ಗ ಏನು ಜನರಿಗೆ ನೀವೆಲ್ಲಾ ಏನು ಮಾತು ಕೊಟ್ಟು ಬಂದಿದ್ದೀರಿ ಆ ಬಗ್ಗೆ ಯೋಚನೆ ಮಾಡಿ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ನಮ್ಮ ಶಾಸಕರ ಬಗ್ಗೆ ನಮಗೆ ಆತಂಕ ಇಲ್ಲ. ಕಾಂಗ್ರೆಸ್ ಏನೆಲ್ಲಾ ಮಾಡುತ್ತಿದೆ ಎಂದು ನಮ್ಮ ಶಾಸಕರು ನನಗೆ ಹೇಳುತ್ತಿದ್ದಾರೆ. ನಮ್ಮ ಪಕ್ಷವನ್ನು ಭದ್ರ ಮಾಡಿಕೊಳ್ಳುವುದು ಹೇಗೆ ಎಂಬುದು ನಮಗೆ ಗೊತ್ತಿದೆ. ಜೆಡಿಎಸ್ ಪಕ್ಷವನ್ನು ಯಾವುದೇ ಶಾಕು,ವೀಕು ಮಾಡಲು ಆಗುವುದಿಲ್ಲ ಎಂದು ಹೇಳಿದರು.