ಬೆಂಗಳೂರು: ಐಪಿಎಲ್ ಫೈನಲ್ ಗೆದ್ದು ಆರ್ ಸಿ ಬಿ ಚಾಂಪಿಯನ್ ಆಗಿರುವ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಘೋರ ದುರಂತ ನಡೆದು ಹೋಗಿದೆ.
ಆರ್ ಸಿ ಬಿ ತಂಡದ ಆಟಗಾರರು ನಗರಕ್ಕೆ ಬಂದಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಚರಣೆ ಆಯೋಜಿಸಲಾಗಿತ್ತು,ಭಾರೀ ನೂಕುನುಗ್ಗಲು ಉಂಟಾಗಿ ಈ ಕಾರ್ಯಕ್ರಮವನ್ನು ವೀಕ್ಷಿಸಲು ಬಂದಿದ್ದ 10 ಮಂದಿ ಆರ್ಸಿಬಿ ಅಭಿಮಾನಿಗಳು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ.

ಕಾಲ್ತುಳಿತದಲ್ಲಿ 50ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಆರಕ್ಕೂ ಹೆಚ್ಚು ಅಭಿಮಾನಿಗಳ ಸ್ಥಿತಿ ಗಂಭೀರವಾಗಿದೆ.
ಕಾಲ್ತುಳಿತದಲ್ಲಿ ಅಸ್ವಸ್ಥಗೊಂಡವರನ್ನು ಬೆಂಗಳೂರಿನ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಲ್ತುಳಿತದಲ್ಲಿ ಬೆಂಗಳೂರಿನ ಯಲಹಂಕದ ಓರ್ವ ಮಗು ಕೂಡಾ ಮೃತಪಟ್ಟಿದೆ.
ಅಸ್ವಸ್ಥಗೊಂಡ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದ ಓರ್ವ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟರೆ,
ಬೌರಿಂಗ್ ಆಸ್ಪತ್ರೆಯಲ್ಲಿ ಮೂವರು ಮಹಿಳೆಯರು, ಮೂವರು ಪುರುಷರು ಸೇರಿದಂತೆ ಆರು ಮಂದಿ ಅಭಿಮಾನಿಗಳ ಮೃತದೇಹ ಇರಿಸಲಾಗಿದೆ.
ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.ಸಂಭ್ರಮ ಈಗ ಸೂತಕವಾಗಿ ಮಾರ್ಪಟ್ಟಂತಾಗಿದೆ.
ಈ ಘೋರ ದುರಂತಕ್ಕೆ ಪ್ರಧಾನಿ ಮೋದಿ,ಸಿಎಂ ಸಿದ್ದರಾಮಯ್ಯ ಸೇರಿ ಅನೇಕರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.