ಐಪಿಎಲ್ ಬೆಟ್ಟಿಂಗ್ ಗೆ ಕಡಿವಾಣ ಹಾಕಲು ಕರ್ನಾಟಕ ಹಿತರಕ್ಷಣ ವೇದಿಕೆ ಆಗ್ರಹ

Spread the love

ಮೈಸೂರು: ನಗರದಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕೆಂದು
ಸೈಬರ್ ಕ್ರೈಮ್ ಅಪರಾಧಗಳ ವಿಭಾಗಕ್ಕೆ
ಕರ್ನಾಟಕ ಹಿತರಕ್ಷಣ ವೇದಿಕೆಯವರು ಮನವಿ ಮಾಡಿದ್ದಾರೆ.

ನಜರ್ಬಾದ್ ನಲ್ಲಿರುವ ಸೈಬರ್ ಕ್ರೈಮ್ ಅಪರಾಧಗಳ ವಿಭಾಗಕ್ಕೆ
ಕರ್ನಾಟಕ ಹಿತರಕ್ಷಣ ವೇದಿಕೆಯ ಸದಸ್ಯರು ತೆರಳಿ ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕರಾದ ನಂದೀಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿ
ದರು.

ಈ‌ ವೇಳೆ ಕರ್ನಾಟಕ ಹಿತರಕ್ಷಣ ವೇದಿಕೆಯ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ,
ಮುಂದಿನ ವಾರದಿಂದ ಐಪಿಎಲ್ ನಡೆಯಲಿದ್ದು ಮುಂದಿನ ಎರಡು ತಿಂಗಳು ಯುವ ಸಮೂಹ ಈ ಕ್ರಿಕೆಟ್ ಹಬ್ಬದಲ್ಲಿ ಮುಳುಗೇಳಲಿದೆ ಎಂದು ಹೇಳಿದರು.

ಇತ್ತೀಚೆಗೆ ಗ್ರಾಮೀಣ ಭಾಗದ ಯುವಕರು, ವಿದ್ಯಾರ್ಥಿಗಳನ್ನು ಐಪಿಎಲ್ ಹೆಚ್ಚಿಗೆ ಆಕರ್ಷಿಸುತ್ತಿವೆ ಜೊತೆಗೆ ಬೆಟ್ಟಿಂಗ್ ದಂಧೆಗೂ ಕಾರಣವಾಗಿವೆ ಎಂದು ಆತಂಕ‌ ವ್ಯಕ್ತಪಡಿಸಿದರು.

ಅನೇಕರು ಈ ದಂಧೆಯಲ್ಲಿ ಸಿಲುಕುತ್ತಿದ್ದಾರೆ, ಸಂಜೆಯಾಗುತ್ತಿದ್ದಂತೆ ಆನ್‌ಲೈನ್ ಕ್ಲಾಸ್ ನೆಪ ಹೇಳಿಕೊಂಡು ಮೊಬೈಲ್‌ನಲ್ಲಿ ಕ್ರಿಕೆಟ್ ವೀಕ್ಷಿಸುತ್ತಾ ಬೆಟ್ಟಿಂಗ್ ದಂಧೆಯಲ್ಲಿ ತೊಡಗುತ್ತಿದ್ದಾರೆ ಎಂದು ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕರ ಗಮನ ಸೆಳೆದರು.

ಕಾಲೇಜು ವಿದ್ಯಾರ್ಥಿಗಳು, ಯುವಕರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಿಂಗ್ ನಲ್ಲಿ ತೊಡಗಿರುತ್ತಾರೆ. ಹಲವು ಯುವಕರು ಇದಕ್ಕಾಗಿ ಸಾಲ ಮಾಡಿ ಮೊಬೈಲ್, ಬೈಕ್ ಅಡಮಾನ ಮಾಡಿ ಕೈ ಸುಟ್ಟುಕೊಂಡ ಉದಾಹರಣೆಗಳಿವೆ ಎಂದು ತಿಳಿಸಿದರು.

ಬೆಟ್ಟಿಂಗ್ ನಲ್ಲಿ ತೊಡಗಿದ ವಿದ್ಯಾರ್ಥಿಗಳು, ಯುವಕರು ಗೆದ್ದ ಖುಷಿಗೆ, ಸೋತ ದುಃಖಕ್ಕೆ ಮದ್ಯದ ಅಮಲಲ್ಲಿ ತೇಲಿದ ನಿದರ್ಶನಗಳು ಇವೆ. ಸಾಲ ತೀರಿಸಲಾಗದೆ ಊರು ಬಿಟ್ಟು ಹೋದ, ಆತ್ಮಹತ್ಯೆಗೆ ಶರಣಾದ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ. ಇನ್ನಷ್ಟು ಜನ ಇಂತಹ ಸಂಕಷ್ಟಕ್ಕೆ ಸಿಲುಕದಂತೆ ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.

ಈ ಬೆಟ್ಟಿಂಗ್ ದಂಧೆ ಫೋನ್ ಮೂಲಕವೇ ನಡೆಯುತ್ತಿದೆ, ಸೈಬರ್ ಕ್ರೈಂ ವಿಭಾಗದ ಪೊಲೀಸರು ಇದಕ್ಕೆ ಕಡಿವಾಣ ಹಾಕಲು ಮುಂದಾಗಬೇಕು ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮವಹಿಸಿ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕು ಎಂದು ವಿನಯ್ ಕುಮಾರ್ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್ ಎನ್ ರಾಜೇಶ್, ಗುರುರಾಜ್ ಶೆಟ್ಟಿ, ಮಂಜುನಾಥ್, ರವಿಚಂದ್ರ, ಸಂತೋಷ್ ಕುಮಾರ್, ರಾಜು ಮತ್ತಿತರರು ಹಾಜರಿದ್ದರು.