ಮೈಸೂರು: ಮೈಸೂರಿನ ಸಾವರ್ಕರ್
ಪ್ರತಿಷ್ಠಾನ ವತಿಯಿಂದ ಇಂದಿರಾ ಗಾಂಧಿ ಜಯಂತಿ ಪ್ರಯುಕ್ತ ಇಂದಿರಾ ಗಾಂಧಿ ಮತ್ತು ಸಾವರ್ಕರ್ ಎಂಬ ವಿಶೇಷ
ಕಾರ್ಯಕ್ರಮವನ್ನು ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಯಿತು.
ಇತ್ತೀಚಿನ ದಿನಗಳಲ್ಲಿ ಮತ ರಾಜಕಾರಣಕ್ಕಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತುಚ್ಚವಾಗಿ ಮಾತನಾಡುವ ಸಂಸ್ಕೃತಿ ಹೆಚ್ಚಾಗಿದೆ. ದೇಶದ ಇತಿಹಾಸದಲ್ಲಿ ಸ್ವಾತಂತ್ರ್ಯ ವೀರ ಎಂದೇ ಜನಮಾನಸದಲ್ಲಿ ನೆಲೆಸಿರುವ ವಿನಾಯಕ ದಾಮೋದರ ಸಾವರ್ಕರ್ ಅವರ ಬಗ್ಗೆ ಕಾಂಗ್ರೆಸ್ ನಾಯಕರು ಬಾಯಿಗೆ ಬಂದಹಾಗೆ ಮಾತನಾಡಿದ್ದಾರೆ,ಆದರೆ ಸಾವರ್ಕರ್ ಅವರ ಬಗ್ಗೆ ಮಾಜಿ ಪ್ರಧಾನಿ, ಕಾಂಗ್ರೆಸಿನ ಪರಮೋಚ್ಚ ನಾಯಕಿಯಾಗಿ ಮೆರೆದ ಇಂದಿರಾ ಗಾಂಧಿಯವರ ಅಭಿಪ್ರಾಯ ಹೇಗಿತ್ತು ಎಂಬ ಬಗ್ಗೆ ಅವರ ಜಯಂತಿಯ ದಿನ ನೆನೆದು ಟೀಕಾಕಾರರ ಕಣ್ಣು ತೆರೆಸುವ ಪ್ರಯತ್ನ ಮಾಡಲಾಯಿತು.
ಅದಕ್ಕೆಂದೇ ಇಂದಿರಾ ಗಾಂಧಿ ಮತ್ತು ಸಾವರ್ಕರ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ೧೯೮೦ರಲ್ಲಿ ಇಂದಿರಾ ಗಾಂಧಿಯವರು ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯದರ್ಶಿಗಳಾಗಿದ್ದ ಪಂಡಿತ್ ಬಾಕ್ಲೆ ಅವರಿಗೆ ಪತ್ರ ಬರೆದು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ವಿರುದ್ದ ಹೋರಾಡಿದ್ದ ಸಾವರ್ಕರ್ ಪಾತ್ರ ಅವಿಸ್ಮರಣೀಯ, ಅವರೊಬ್ಬ ಮರೆಯಲಾಗದ ಭಾರತದ ಹೆಮ್ಮೆಯ ಸುಪುತ್ರ ಎಂದು ಬಣ್ಣಿಸಿದ್ದ ಪತ್ರವನ್ನು ಪ್ರದರ್ಶಿಸಲಾಯಿತು.
ಸಾವರ್ಕರ್ ಗೌರವಾರ್ಥ ಇದೇ ಇಂದಿರಾ ಗಾಂಧಿಯವರು ಬಿಡುಗಡೆ ಮಾಡಿದ್ದ ಅಂಚೆಚೀಟಿಯನ್ನು ಸಹ ಪ್ರದರ್ಶಿಸಲಾಯಿತು.
ಎಲ್ಲಾ ಅಂಚೆಚೀಟಿಯಲ್ಲಿ ವ್ಯಕ್ತಿಯ ಚಿತ್ರ ಮಾತ್ರ ಇದ್ದರೆ, ಸಾವರ್ಕರ್ ಅಂಚೆಚೀಟಿಯಲ್ಲಿ ಅವರು ಕರಿನೀರಿನ ಶಿಕ್ಷೆ ಅನುಭವಿಸಿದ್ದ ಅಂಡಮಾನಿನ ಜೈಲಿನ ಚಿತ್ರ ಇರುವುದು ವಿಶೇಷ.
ಇಂದಿರಾ ಗಾಂಧಿಯವರು ಸಾವರ್ಕರ್ ಟ್ರಸ್ಟಿಗೆ ಹನ್ನೊಂದು ಸಾವಿರ ರೂಪಾಯಿ ದೇಣಿಗೆಯನ್ನು ತಮ್ಮ ಸ್ವಂತ ಹಣದಿಂದ ನೀಡಿದ್ದರು ಎಂಬುದನ್ನು ಈ ವೇಳೆ ಸ್ಮರಿಸಲಾಯಿತು.
೧೯೮೩ರಲ್ಲಿ ಇಂದಿರಾ ಗಾಂಧಿಯವರು ಚಲನಚಿತ್ರ ವಿಭಾಗಕ್ಕೆ ಸೂಚಿಸಿ “ಮಹಾನ್ ಕ್ರಾಂತಿಕಾರಿಯ ಜೇವನ”ದ ಬಗ್ಗೆ ಸಾಕ್ಷಚಿತ್ರ ನಿರ್ಮಿಸಿದ್ದರು. ಅದನ್ನು ಸಹ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.
ಜೊತೆಗೆ ೧೯೨೩ನಲ್ಲಿ ಕಾಕಿನಾಡಾದಲ್ಲಿ ನಡೆದ ಕಾಂಗ್ರಸಿನ ೩೮ನೇ ರಾಷ್ಟ್ರೀಯ ಅಧಿವೇಶನದಲ್ಲಿ ಪ್ರಮುಖ ನಿರ್ಣಯಗಳಲ್ಲಿ ವೀರ ಸಾವರ್ಕರ್ ಅವರನ್ನು ನಿರಂತರ ಬಂಧನಕ್ಕೊಳಪಡಿಸಿರುವುದರ ವಿರುದ್ದ ಖಂಡನಾ ನಿರ್ಣಯ ಕೈಗೊಂಡಿದ್ದನ್ನು ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ತನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುವ ಸರ್ವಾನುಮತದ ನಿರ್ಣಯವನ್ನು ಕಾರ್ಯಕ್ರಮದಲ್ಲಿ ನೆನೆಯಲಾಯಿತು.
ಇಂದಿರಾ ಗಾಂಧಿ ಅವರ ಕಾಲದಲ್ಲಿ ಕಾಂಗ್ರೆಸಿಗರಿಂದ ವೀರ ಎನ್ನಿಸಿಕೊಂಡಿದ್ದ ಸಾವರ್ಕರ್ ರನ್ನು ಇಂದು ರಾಹುಲ್ ಗಾಂಧಿ ಕಾಲದಲ್ಲಿ ಹೇಡಿ ಎಂದು ಕರೆಯುತ್ತಿರುವ ಬಗ್ಗೆ ಟೀಕಿಸಲಾಯಿತು.
ಅದರಲ್ಲೂ ಸಚಿವ ಪ್ರಿಯಾಂಕ ಖರ್ಗೆ, ಬಿ.ಕೆ. ಹರಿಪ್ರಸಾದ್ ರಂತವರ ವಿರುದ್ದ ಆಕ್ರೋಷ ವ್ಯಕ್ತವಾಯಿತು.
ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಸಹ ಇತ್ತೀಚೆಗೆ ಸಾವರ್ಕರ್ ಕುರಿತು ನಾಲಿಗೆ ಹರಿಬಿಟ್ಟಿದ್ದಾರೆ. ಅವರೆಲ್ಲರಿಗೂ ಇತ್ತಿಚೆಗೆ ರಾಹುಲ್ ಗಾಂಧಿ ಅವರಿಗೆ ಛೀಮಾರಿ ಹಾಕಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ನೆನಪಾಗಬೇಕು ನ್ಯಾಯಮೂರ್ತಿ ದೀಪಾಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ಬಹಳ ಸ್ಪಷ್ಟವಾಗಿ ತೀರ್ಪನ್ನು ನೀಡಿದ್ದಾರೆ.
ಮಹಾತ್ಮಾ ಗಾಂಧಿಯವರು ಕೂಡ ಬ್ರಿಟಿಷ್ ವೈಸರಾಯ್ ಗೆ ಬರೆದ ಪತ್ರಗಳಲ್ಲಿ “ಯುವರ್ ಫೈತ್ ಫುಲ್ ಸರ್ವೆಂಟ್” ಎಂಬ ಅಭಿವಂದನಾ ಪದವನ್ನು ಬಳಸುತ್ತಿದ್ದರು, ಅವರನ್ನೂ ರಾಹುಲ್ ಗಾಂಧಿ ಟೀಕಿಸುತ್ತಾರಾ? ಎಂದು ಪ್ರಶ್ನಿಸಿದ್ದಲ್ಲದೇ ಅಂದಿನ ಕಾಲದಲ್ಲಿ ಬ್ರಿಟಿಷರಿಗೆ ಬರೆಯುತ್ತಿದ್ದ ಪತ್ರಗಳಲ್ಲಿ ಈ ರೀತಿ ಅಭಿನಂದನಾ ಪದ ಬಳಸುವುದು ಸಾಮಾನ್ಯವಾಗಿತ್ತು, ಕೋಲ್ಕತ್ತಾ ನ್ಯಾಯಾಧೀಶರು ಸಹ ಸರ್ವೋಚ್ಛ ನ್ಯಾಯಾಧೀಶರನ್ನು ಇದೇ ರೀತಿ ಸಂಭೋದಿಸುತ್ತಿದ್ದರು ಎಂಬುದನ್ನು ಸಹ ನ್ಯಾಯಾಲಯ ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಕಾಂಗ್ರೆಸ್ ಮುಖಂಡರೂ ಆದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಗ್ವಿ ಅವರಿಗೆ ಸ್ಪಷ್ಟವಾಗಿ ತಿಳಿಸಿದೆ.
ಜೊತೆಗೆ ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗಲೇ ಸಾವರ್ಕರ್ ರವರನ್ನು ಹೊಗಳಿ ಪತ್ರ ಬರೆದಿದ್ದನ್ನು ರಾಹುಲ್ ಗಾಂಧಿಯವರಿಗೆ ಜ್ಞಾಪಿಸಿ ಎಂದು ತಿಳಿಸಿದೆ.
ಮತ್ತೊಮ್ಮೆ ಇಂತಹ ಹೇಳಿಕೆ ನೀಡಿದರೆ ನ್ಯಾಯಾಲಯ ಸ್ವಯಂ ಪ್ರೆರಣೆಯಿಂದ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.
ನೆಹರೂರವರನ್ನು ನಭಾ ಜೈಲಿಗೆ ಹಾಕಿದಾಗ ಅವರ ತಂದೆ ಮೋತಿಲಾಲ್ ನೆಹರು ಸಹ ಕ್ಷಮಾಪಣೆ ಪತ್ರವನ್ನು ವೈಸಾರಾಯ್ ಬಳಿ ಕೊಂಡೋಯ್ದಿದ್ದರು, ಅದು ಜೈಲಿಗೆ ಹಾಕಿದ ಕೇವಲ ನಾಲ್ಕೇ ದಿನಕ್ಕೆ ಎಂಬುದನ್ನು ಸಾವರ್ಕರ್ ಟೀಕಿಸುವ ಕಾಂಗ್ರೆಸ್ ನಾಯಕರು ನೆನೆಸಿಕೊಳ್ಳಬೇಕು ಎಂಬುದನ್ನು
ಅಂಕಣಕಾರ ಹಾಗೂ ಚಿಂತಕರಾದ ಪ್ರವೀಣ್ ಕುಮಾರ್ ಮಾವಿನಕಾಡು ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಸಾವರ್ಕರ್ ಪ್ರತಿಷ್ಠಾನದ ಕಾರ್ಯದರ್ಶಿ ರಾಕೇಶ್ ಭಟ್, ಆದಿತ್ಯ ಅಧಿಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಚಂದ್ರಶೇಖರ, ಪ್ರತಿಷ್ಠಾನದ ಸಹ-ಕಾರ್ಯದರ್ಶಿ ಶಿವು ಚಿಕ್ಕಕಾನ್ಯ, ಸಾವರ್ಕರ್ ಯುವ ಬಳಗದ ವಿಕ್ರಂ ಅಯ್ಯಂಗಾರ್, ಸಂದೇಶ್ ಪವಾರ್, ಪ್ರತಿಷ್ಠಾನದ ಮೈಸೂರು ಕೇಂದ್ರ ಸಮಿತಿಯ ಎಸ್. ಮಹೇಶ್ ಕುಮಾರ್, ಶಿವು ಪಟೇಲ್, ಡಿ. ರಾಘವೇಂದ್ರ, ಹೆಚ್ ಎಸ್ ಹಿರಿಯಣ್ಣ, ಮಂಗಳ ಗೌರಮ್ಮ ಸೇರಿದಂತೆ ಅನೇಕ ಇಂದಿರಾ ಹಾಗೂ ಸಾವರ್ಕರ್ ಅಭಿಮಾನಿಗಳು ಭಾಗವಹಿಸಿದ್ದರು.
