ಭಾರತಕ್ಕೆ ಉಕ್ಕು ಕ್ಷೇತ್ರ ಶಕ್ತಿ ತುಂಬುತ್ತಿದೆ ಹೆಚ್.ಡಿ.ಕುಮಾರಸ್ವಾಮಿ

Spread the love

ಬೆಂಗಳೂರು: ಭಾರತ ಜಗತ್ತಿನ 5ನೇ ಬೃಹತ್ ಆರ್ಥಿಕ ಶಕ್ತಿಯಾಗಲು ನಾಗಾಲೋಟದಲ್ಲಿ ಮುನ್ನುಗುತ್ತಿದ್ದು, ಅದಕ್ಕೆ ಹೃದಯದಂತೆ ಉಕ್ಕು ಉದ್ಯಮ ತನ್ನ ಪಾತ್ರ ನಿರ್ವಹಿಸುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬೆಂಗಳೂರಿನಲ್ಲಿ ಗುರುವಾರ ಭಾರತೀಯ ಲೋಹ ಸಂಸ್ಥೆ(ಐಐಎಂ) ಹಮ್ಮಿಕೊಂಡಿದ್ದ ಲೋಹಶಾಸ್ತ್ರಜ್ಞ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಈಗ ಜಗತ್ತಿನ 6ನೇ ದೈತ್ಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. 5ನೇ ಸ್ಥಾನಕ್ಕೆ ಏರಲು ಭಾರತ ವೇಗವಾಗಿ ಸಾಗುತ್ತಿದೆ. ಈ ಪ್ರಯತ್ನಕ್ಕೆ ಉಕ್ಕು ಉದ್ಯಮ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಉಕ್ಕು ಕ್ಷೇತ್ರದ ಉನ್ನತಿಗಾಗಿ ಕೇಂದ್ರ ಸರ್ಕಾರ ಸದಾ ಬೆಂಬಲ ಕೊಡುತ್ತಿದೆ. ಈ ನಿಟ್ಟಿನಲ್ಲಿ ರೂಪಿಸಲಾಗಿರುವ ರಾಷ್ಟ್ರೀಯ ಉಕ್ಕಿನ ನೀತಿ ಈ ಉದ್ಯಮಕ್ಕೆ ಬಲ ನೀಡುತ್ತಿದೆ. ಸ್ಪೆಷಾಲಿಟಿ ಸ್ಟೀಲ್‌ ಉತ್ಪಾದನೆ, ಗ್ರೀನ್ ಸ್ಟೀಲ್ ತಯಾರಿಕೆಯಲ್ಲಿ ಮುಂಚೂಣಿಗೆ ಬರಲು ಎಲ್ಲಾ ರೀತಿಯ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಾಗತಿಕ ಪರಿಸರ ಸಮತೋಲನದ ಉದ್ದೇಶದ ಹಿನ್ನೆಲೆಯಲ್ಲಿ ಉಕ್ಕಿನ ಸುಸ್ಥಿರ ಉತ್ಪಾದನೆಗೆ ಹೈಡ್ರೋಜನ್ ಆಧಾರಿತ ಉಕ್ಕು ತಯಾರಿಕೆ ಮತ್ತು ಉಕ್ಕಿನ ಮರು ಬಳಕೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಅವರು ಹೇಳಿದರು.

ಭಾರತೀಯ ಲೋಹ ಸಂಸ್ಥೆ ಅಧ್ಯಕ್ಷ ಸಜ್ಜನ್ ಜಿಂದಾಲ್ ಅವರು ಸಚಿವರನ್ನು ಬರಮಾಡಿಕೊಂಡು ಗೌರವಿಸಿದರು.

ಇದೇ ವೇಳೆ ಉಕ್ಕು ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಎಸ್ಆರ್ ಉಕ್ಕು ಸಂಸ್ಥೆ ಸಿಇಒ ಶಶಿ ಮೊಹಂತಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ, ಡಾ.ಟಿ.ಪಿ.ಡಿ.ರಾಜನ್ ಅವರಿಗೆ ರಾಷ್ಟ್ರೀಯ ಲೋಹಶಾಸ್ತ್ರಜ್ಞ ಪ್ರಶಸ್ತಿ, ಡಾ.ಡಿ.ಸತೀಶ್ ಕುಮಾರ್ ಅವರಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಶಸ್ತಿ, ಡಾ.ಸಾಯಿ ಗೌತಮ್ ಕೃಷ್ಣನ್ ಮತ್ತು ಬಿರಾಜ್ ಕುಮಾರ್ ಸಾಹು ಅವರಿಗೆ ಯುವ ಲೋಹಶಾಸ್ತ್ರಜ್ಞ ಪ್ರಶಸ್ತಿಯನ್ನು ಸಚಿವ ಕುಮಾರಸ್ವಾಮಿ ಪ್ರದಾನ ಮಾಡಿದರು.

ಭಾರತೀಯ ಉಕ್ಕು ಪ್ರಾಧಿಕಾರ ಅಧ್ಯಕ್ಷ ಅಮರೆಂದು ಪ್ರಕಾಶ್, ಭಾರತೀಯ ಲೋಹ ಸಂಸ್ಥೆ ಉಪಾಧ್ಯಕ್ಷ ಪ್ರೊ.ಬಿ.ಎಸ್.ಮೂರ್ತಿ, ಬ್ರಿಗೇಡಿಯರ್ ಅರುಣ್ ಗಂಗೂಲಿ, ಸಂಸ್ಥೆಯ ಸಂಚಾಲಕ ಡಾ. ಧೀರೇನ್ ಪಾಂಡ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು.