ಮೈಸೂರು: ಬೇಸಿಗೆಯಲ್ಲಿನ ಕೂಲಿ ಕಾರ್ಮಿಕರ ವಲಸೆ ತಪ್ಪಿಸಿ ಅವರಿರುವಲ್ಲೇ ಕೆಲಸ ನೀಡಲು ದುಡಿಯೋಣ ಬಾ ವಿಶೇಷ ಅಭಿಯಾನ ಬಂದಿದೆ.
ಬಿರು ಬೇಸಿಗೆಯಲ್ಲಿ ದುಡಿಮೆಗೆ ನಗರವನ್ನರಿಸಿ ಹೋಗುವ ಮಂದಿಗೆ ತಮ್ಮ ಹಳ್ಳಿಯಲ್ಲೇ ಸ್ಥಳೀಯವಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ನಿರಂತರ ಕೆಲಸವನ್ನು ಒದಗಿಸಲು ಜಿಲ್ಲಾ ಪಂಚಾಯಿತಿಯಿಂದ ದುಡಿಯೋಣ ಬಾ ವಿಶೇಷ ಅಭಿಯಾನದ ಆಸರೆ ಹೆಜ್ಜೆಯನ್ನಿಟ್ಟಿದೆ.
ಸರ್ಕಾರದ ಸೂಚನೆ ಮೇರೆಗೆ ಒಂದು ತಿಂಗಳ ಕಾಲ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಅರ್ಹ ಕೂಲಿಕಾರರು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ಪಡೆದುಕೊಳ್ಳಬಹುದಾಗಿದೆ.
ಈ ಅಭಿಯಾನದ ಮೂಲಕ ಅರ್ಹ ಕೂಲಿಕಾರರಿಗೆ ನರೇಗಾ ಯೋಜನೆಯ ಕುರಿತು ಮಾಹಿತಿ ನೀಡಲಾಗುತ್ತಿದ್ದು, ನರೇಗಾ ಯೋಜನೆಯಡಿ ಕೂಲಿಕಾರರಿಗೆ 100 ದಿನಗಳ ಅಕುಶಲ ಕೆಲಸವನ್ನು ಒದಗಿಸಲು ದುಡಿಯೋಣ ಬಾ ಅಭಿಯಾನವನ್ನು ಈಗಾಗಲೇ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನಡೆಸಲು ಮುಂದಾಗಿದೆ.
ಕೆಲಸ ಪಡೆಯುವುದು ಹೇಗೆ: ಮ-ನರೇಗಾ ಯೋಜನೆಯಡಿ ಅರ್ಹ ಕುಟುಂಬಗಳು ಜಾಬ್ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು. ಇದಕ್ಕಾಗಿ ಗ್ರಾಮೀಣ ಭಾಗದ 18 ವರ್ಷ ಮೇಲ್ಪಟ್ಟವರು ತಮ್ಮ ವ್ಯಾಪ್ತಿಯ ಗ್ರಾಪಂ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ, ಜಾಬ್ ಕಾರ್ಡ್ ಪಡೆಯಬಹುದು.
ನಂತರ ಕೂಲಿಕಾರರು ಗ್ರಾಮ ಪಂಚಾಯಿತಿಗೆ ಕೆಲಸದ ಅರ್ಜಿ ಸಲ್ಲಿಸಿ ಸಾಮೂಹಿಕ ಕೆಲಸ ಪಡೆಯಬೇಕು. ದುಡಿಯೋಣ ಬಾ ಅಭಿಯಾನದಡಿ ಮ-ನರೇಗಾ ಯೋಜನೆಯಿಂದ ಹೊರಗಿರುವ ಅರ್ಹ ಕುಟುಂಬ ಮತ್ತು ದುರ್ಬಲ ವರ್ಗಗಳ ಕುಟುಂಬಗಳನ್ನು ಗುರುತಿಸುವುದು.
ನೊಂದಾಯಿತ ಕೂಲಿಕಾರರಿಗೆ ನಿರಂತರ ಅಕುಶಲ ಕೆಲಸವನ್ನು ಒದಗಿಸಿ ವಲಸೆ ಪ್ರವೃತ್ತಿಯನ್ನು ತಗ್ಗಿಸುವುದು. ದುರ್ಬಲ ವರ್ಗದ ಕುಟುಂಬ ಹಾಗೂ ವಿಶೇಷ ಚೇತನರು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಅಭಿಯಾನದ ಉದ್ದೇಶವಾಗಿದೆ.
ದಿನಗೂಲಿ ಹೆಚ್ಚಳ: 2025-26 ನೇ ಸಾಲಿನ ಏಪ್ರಿಲ್ 1 ರಿಂದ ಮ-ನರೇಗಾ ಯೋಜನೆಯಡಿ ದುಡಿಯುವ ಕಾರ್ಮಿಕರ ಒಂದು ದಿನದ ವೇತನ 370ಕ್ಕೆ ಏರಿಕೆಯಾಗಿದೆ.
ಯೋಜನೆಯಡಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ ನೀಡಲಾಗುತ್ತಿದೆ. ಜಾಬ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಯೋಜನೆಯಡಿ 5 ಲಕ್ಷ ರೂ. ವರೆಗೆ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ.
ಸಮುದಾಯ ಕಾಮಗಾರಿಗಳು: ಮ-ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವುದು, ನಾಲಾ ಅಭಿವೃದ್ಧಿ, ರಸ್ತೆ ಬದಿ ನೆಡುತೋಪು, ಕೃಷಿ ಅರಣ್ಯೀಕರಣ, ಶಾಲಾಭಿವೃದ್ಧಿ ಕಾಮಗಾರಿಗಳು, ಅಂಗನವಾಡಿ, ಗ್ರಾಮೀಣ ರಸ್ತೆ, ಚರಂಡಿ ಕಾಮಗಾರಿಗಳು ಸೇರಿದಂತೆ ಇತರೆ ಕಾಮಗಾರಿಗಳಲ್ಲಿ ದುಡಿಯಲು ಅವಕಾಶವಿದ್ದು, ಈ ಕುರಿತು ಅಭಿಯಾನದಲ್ಲಿ ಅರಿವು ಮೂಡಿಸಲಾಗುತ್ತದೆ. ಗ್ರಾಮೀಣ ಭಾಗದ ಜನರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.