ಅಕ್ರಮವಾಗಿ ತಮಿಳುನಾಡಿಗೆ ಸಾಗಿಸುತ್ತಿದ್ದ 30 ಟನ್ ಪಡಿತರ ಅಕ್ಕಿ ವಶ

(ವರದಿ:ಸಿದ್ದರಾಜು ಕೊಳ್ಳೇಗಾಲ)

ಕೊಳ್ಳೇಗಾಲ: ಅಕ್ರಮವಾಗಿ ತಮಿಳುನಾಡಿಗೆ ಸಾಗಿಸುತ್ತಿದ್ದ 30 ಟನ್ ಪಡಿತರ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪೊಲೀಸರ ಸಹಕಾರದೊಡನೆ ವಶಪಡಿಸಿಕೊಂಡಿದ್ದಾರೆ.

ಕಾಳಸಂತೆ ದಂದೆ ಕೋರರು ಕೆ ಎ 10 ಎ 2082 ಸಂಖ್ಯೆಯ 12 ಚಕ್ರದ ಅಶೋಕ ಲೈಲ್ಯಾಂಡ್ ಲಾರಿಯಲ್ಲಿ ಅಕ್ಕಿ ಸಾಗಿಸುತ್ತಿದ್ದರು.

ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿರೀಕ್ಷಕ ಎಂ ಎನ್ ಪ್ರಸಾದ್ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪಟ್ಟಣ ಠಾಣೆ ಪೊಲೀಸರ ಜೊತೆ ದಾಳಿ ನಡೆಸಿದ್ದಾರೆ.

ಅಕ್ಕಿ ತುಂಬಿದ ಲಾರಿ ಮಲೆ ಮಹದೇಶ್ವರ ಬೆಟ್ಟ ರಸ್ತೆಯ ಗ್ರಾಮಾಂತರ ಠಾಣೆ ಎದುರು ಬರುತ್ತಿದ್ದಂತೆ ತಡೆದು ನಿಲ್ಲಿಸಿದಾಗ ಚಾಲಕ ಲಾರಿ ನಿಲ್ಲಿಸಿ ಪರಾರಿಯಾಗಿದ್ದಾನೆ.

ನಂತರ ಅಧಿಕಾರಿಗಳು ಲಾರಿಯನ್ನು ಪರಿಶೀಲಿಸಿದಾಗ ಅಕ್ರಮವಾಗಿ ಅಕ್ಕಿಯನ್ನು ಸಾಗಾಟ ಮಾಡುತ್ತಿರುವುದು ಬಯಲಾಗಿದೆ. ಸುಮಾರು 550 ಕ್ಕೂ ಹೆಚ್ಚು ಗೋಣಿ ಚೀಲಗಳಲ್ಲಿ 30.250 ಟನ್ ಪಡಿತರ ಅಕ್ಕಿ ತುಂಬಿದ್ದ ಚೀಲಗಳ ಮೇಲೆ ಮಹದೇವ ರೈಸ್ ಮಿಲ್ ಹಾಗೂ ಶಿವಶಂಕರ್ ರೈಸ್ ಮಿಲ್ ಎಂಬ ಚೀಟಿಯನ್ನು ಅಂಟಿಸಿದ್ದುದು ಕಂಡು ಬಂದಿದೆ.

ಅಕ್ಕಿ ತುಂಬಿದ ಲಾರಿಯನ್ನು ಶಿಗ್ಗಾಂವಿಯಿಂದ ಟಿ ನರಸಿಪುರ – ಕೊಳ್ಳೇಗಾಲ – ರಾಮಾಪುರ ಮಾರ್ಗವಾಗಿ ತಮಿಳುನಾಡಿಗೆ ಸಾಗಿಸಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.

ಕಳಸಂತೆ ದಂದೆ ಕೋರರು ಮಧ್ಯವರ್ತಿಗಳ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಅನ್ನಭಾಗ್ಯ ಫಲಾನುಭವಿಗಳಿಂದ ಕಡಿಮೆ ಬೆಲೆಗೆ ಅಕ್ಕಿ ಖರೀದಿಸಿ ಒಂದೆಡೆ ಸಂಗ್ರಹಿಸಿ ರೈಸ್ ಮಿಲಿಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಸಾಗಾಟ ಮಾಡುತ್ತಿರುವುದು ನಿರಂತರವಾಗಿದೆ.

ದಾಳಿಯಲ್ಲಿ ಪಟ್ಟಣ ಠಾಣೆ ಪ್ರಭಾರ ಆರಕ್ಷಕ ಉಪನಿರೀಕ್ಷಕ ಸುಪ್ರೀತ್, ಎಎಸ್ಐ ಮಧುಕುಮಾರ್, ಮುಖ್ಯ ಪೇದೆ ಸೂರ್ಯಪ್ರಕಾಶ್, ಪೇದೆಗಳಾದ ಸಚಿನ್, ಅನಿಲ್, ಚಾಲಕ ನಂಜುಂಡಸ್ವಾಮಿ ಭಾಗವಹಿಸಿದ್ದರು.

ಲಾರಿಯನ್ನು ವಶಪಡಿಸಿಕೊಂಡ ನಂತರ ಆಹಾರ ನಿರೀಕ್ಷಕ ಪ್ರಸಾದ್ ಅವರು ಪಟ್ಟಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.