ಹುಣಸೂರಿನಲ್ಲಿ ಅಕ್ರಮವಾಗಿ ಬೆಲೆಬಾಳುವ ಮರಗಳಿಗೆ ಕತ್ತರಿ:ಚೆಲುವರಾಜು ಆಕ್ರೋಶ

Spread the love

ಹುಣಸೂರು: ಹುಣಸೂರು ಸಮೀಪ ಬೈಪಾಸ್ ರಸ್ತೆ ಹಾಳಗೆರೆ ಬಳಿ ಸುಮಾರು ಒಂದೂವರೆ ಕಿಲೋಮೀಟರ್ ಉದ್ದಕ್ಕೂ ರಸ್ತೆ ಬದಿ ಇದ್ದ ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕತ್ತರಿಸಲಾಗಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ‌ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಇದರಲ್ಲಿ ಸ್ಥಳೀಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು, ಇತರೆ ಅಧಿಕಾರಿಗಳು, ಜನಪ್ರತಿನಿಧಿಗಳು ಯಾರು ಶಾಮಿಲಾಗಿದ್ದಾರೋ ತಿಳಿಯದು, ಆದರೆ ಮರ ಕತ್ತರಿಸಿರುವುದು ಸತ್ಯ. ಈಗಾಗಲೇ ಮರಗಳನ್ನು ಕತ್ತರಿಸಿ ತುಂಡು ಮಾಡಲಾಗಿದ್ದು ಅವುಗಳನ್ನು ಸಾಗಿಸಲು ನಾಲ್ಕೈದು ಲಾರಿಗಳನ್ನು ಇಲ್ಲಿ ನಿಲ್ಲಿಸಲಾಗಿದೆ.
ನಾನು ಈ ಕುರಿತು ಈಗಾಗಲೇ ಸಂಬಂಧಪಟ್ಟ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಚೆಲುವರಾಜು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.

ದೂರು ಆಲಿಸಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮರ ಮತ್ತು ಲಾರಿಗಳನ್ನು ಸ್ಥಳದಿಂದ ಎತ್ತಲು ಅವಕಾಶ ನೀಡಿಲ್ಲ, ದಾಖಲೆಗಳನ್ನು ತೋರಿಸಿ ತೆಗೆದು ಕೊಂಡು ಹೋಗಬಹುದು ಎಂದು ಸ್ಥಳದಲ್ಲಿದ್ದವರಿಗೆ ತಾಕೀತು ಮಾಡಿ ಮರದ ತುಂಡುಗಳು ಅಲ್ಲೇ ಉಳಿಯುವಂತೆ ಮಾಡಿದ್ದಾರೆ, ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಅವರು ತಿಳಿಸಿದರು.

ರಸ್ತೆ ಉದ್ದಕ್ಕೂ ಗಿಡ ಮರಗಳಿದ್ದರೆ ದಾರಿಹೋಕರಿಗೆ ನೆರಳಾಗಿರುತ್ತದೆ ಮತ್ತು ಪರಿಸರ ಸ್ವಚ್ಛತೆಯಿಂದ ಇರುತ್ತದೆ ಆದರೆ ಇವರು ಮರಗಳನ್ನು ಕಡಿಯುವ ಮೂಲಕ ಸಾಲಮರದ ತ್ತಿಮ್ಮಕ್ಕ ಅವರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲಿನ ಸಂಬಂಧಪಟ್ಟ ಅಧಿಕಾರಿಗಳನ್ನು ಮರ ಕತ್ತರಿಸಿರುವ ಬಗ್ಗೆ ಕೇಳಿದರೆ ಟೆಂಡರ್ ಆಗಿದೆ, ಟೆಂಡರ್ ಪಡೆದವರು ಮರ ಕತ್ತರಿಸಿ ತೆಗೆದುಕೊಂಡು ಹೋಗುತ್ತಾರೆ ಎಂದು ಉಡಾಫೆ ಉತ್ತರ ನೀಡುತ್ತಾರೆ, ಆದರೆ ಒಂದು ಎರಡು ಮರಗಳಿಗೆ ಟೆಂಡರ್ ಆಗಿದ್ದರೆ ಇವರು ರಸ್ತೆ ಉದ್ದಕ್ಕೂ ಇರುವ ಎಲ್ಲ ಮರಗಳನ್ನು ಕಡಿದು, ಅಕ್ರಮ ಎಸಗಿದ್ದಾರೆ. ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮರ ಕತ್ತರಿಸಿರುವವರ ವಿರುದ್ಧ ಮತ್ತು ಟೆಂಡರ್ ಪಡೆದಿರುವವರ ವಿರುದ್ಧ ಹಾಗೂ ಮರ ಕತ್ತರಿಸಲು ಅನುವು ಮಾಡಿಕೊಟ್ಟ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಚೆಲುವರಾಜು ಆಗ್ರಹಿಸಿದ್ದಾರೆ.

ಶಿಥಿಲವಾಗಿರುವ ಮರಗಳನ್ನು ಕತ್ತರಿಸದಿದ್ದರೆ ಅನಾಹುತ ಆಗುತ್ತದೆ.ಅಂತವನ್ನು ಕಡಿದರೆ ನಮ್ಮ ಅಭ್ಯಂತರ ಇಲ್ಲ, ಆದರೆ ಚೆನ್ನಾಗಿರುವ ಇನ್ನು ಬಹಳ‌ವರ್ಷ ಬಾಳುವ, ಜನರಿಗೆ ನೆರಳು ಕೊಡುವ ಬೆಲೆಬಾಳುವ ಮರಗಳನ್ನು ಕಡಿದು ಹಾಕುತ್ತಿದ್ದಾರೆ ಇದು ಅಕ್ರಮ, ಹಗಲು ದರೋಡೆ ಎಂದು ಕರ್ನಾಟಕ ಪ್ರಜಾ ಪಾರ್ಟಿಯವರು ಕೆಂಡ ಕಾರಿದ್ದಾರೆ.

ಮರಗಳನ್ನು ಕತ್ತರಿಸಿ ಬೇರೆ ಕಡೆ ಸಾಗಿಸಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೀಗೆ ಅಕ್ರಮ ಎಸಗುವವರನ್ನು ಹೇಳುವವರು ಕೇಳುವವರು ಯಾರು ಇಲ್ಲವೇ ಎಂದು ಚೆಲುವರಾಜು ತೀವ್ರವಾಗಿ ಖಂಡಿಸಿದ್ದಾರೆ.

ತಕ್ಷಣ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು, ಪೊಲೀಸ್ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂದೆ ಉತ್ತಮವಾದ ಚೆನ್ನಾಗಿರುವ ಮರಗಳನ್ನು ಕಡಿಯದಂತೆ ನೋಡಿಕೊಳ್ಳಬೇಕು ಹಾಗೂ ಮರಗಳನ್ನು ಕತ್ತರಿಸಿ ಅಕ್ರಮ ಮಾಡಿರುವ ವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲೇಬೇಕು ಇಲ್ಲದಿದ್ದರೆ ಕರ್ನಾಟಕ ಪ್ರಜಾ ಪಾರ್ಟಿಯಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಚೆಲುವರಾಜು ಎಚ್ಚರಿಸಿದ್ದಾರೆ.