(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೆಗಾಲ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತಿದ್ದ ವೇಳೆ ಪೊಲೀಸ್ ಇಲಾಖೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ
ಚುರುಕು ಮುಟ್ಟಿಸಿದ್ದಾರೆ.
ಈ ವೇಳೆ ಪಡಿತರ ಅಕ್ಕಿ ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದು ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ನೆನ್ನೆ 4:30 ರ ವೇಳೆ ಸತ್ತೆಗಾಲ ರಸ್ತೆಯಲ್ಲಿ ಚಾ.ನಗರ ಪಟ್ಟಣದ ಮೂವರು ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತಿದ್ದರು.
ಆಹಾರ ಇಲಾಖೆ ಶಿರಸ್ತೆದಾರ್ ವಿಶ್ವನಾಥ್ ಅವರಿಗೆ ಬಂದ ಖಚಿತ ಮಾಹಿತಿ ಆಧರಿಸಿ ಪೊಲೀಸ್ ಇಲಾಖೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚೆಲುವನಹಳ್ಳಿ ಅಡ್ಡರಸ್ತೆ ಬಳಿ ಕಾರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಕೆ.ಎ.05_ಎಂ.ಟಿ. 3778 ಸಂಖ್ಯೆಯ ಸ್ವಿಪ್ಟ್ ಕಾರಿನಲ್ಲಿದ್ದ 248 ಕೆ.ಜಿ ಪಡಿತರ ಅಕ್ಕಿ ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಇದಾಯತ್, ಜುಬೇದ್ ಮತ್ತು ವಾಸೀಂ ಎಂಬುವವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಪಡಿತರ ಅಕ್ಕಿ ಖರೀದಿಸಿ ಸಾಗಾಟ ಮಾಡುವ ಜಾಲಗಳ ಮೇಲೆ ಪೊಲೀಸರು ಮತ್ತೆ ಆಹಾರ ಇಲಾಖೆ ಅಧಿಕಾರಿಗಳು ಎಷ್ಟೇ ಧಾಳಿ ನಡೆಸಿ ಅಕ್ರಮವನ್ನು ಬೇಧಿಸುತಿದ್ದರೂ ಮತ್ತೆ ಈ ಜಾಲಗಳು ಕವಲೊಡೆಯುತಿದೆ.
ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿಯನ್ನು ಖರೀದಿಸಿ ದಾಸ್ತಾನು ಮಾಡಿಕೊಂಡು ಹೆಚ್ಚಿನ ಬೆಲೆಗೆ ರೈಸ್ ಮಿಲ್ ಮಾಲೀಕರಿಗೆ ಸಾಗಿಸುವ ವ್ಯವಸ್ಥಿತ ಕಳ್ಳ ಜಾಲಗಳು ಬಡವರನ್ನೆ ಬಂಡವಾಳ ಮಾಡಿಕೊಂಡಿವೆ.
ಉಚಿತವಾಗಿ ನೀಡುವ ಶಕ್ತಿವರ್ಧಿತ ಪಡಿತರ ಅಕ್ಕಿಯನ್ನು ಏನೇನೋ ನೆಪ ಹೇಳಿಕೊಂಡು ಬರುವ ಅಕ್ಕಿ ಕಳ್ಳರ ಜಾಲ ಅದನ್ನು ಬಳಸದಂತೆ ನೋಡಿಕೊಂಡು ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಅದನ್ನ ರೈಸ್ ಮಿಲ್ ಗಳಿಗೆ ತೆಗೆದುಕೊಂಡು ಹೋಗಿ ಪಾಲಿಶ್ ಮಾಡಿ ಅದೇ ಅಕ್ಕಿಯನ್ನ 25 ಕೆ.ಜಿಯ ಬ್ರಾಂಡೆಡ್ ಚೀಲಕ್ಕೆ ತುಂಬಿ ದಿನಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದಾರೆ.
ಇಲ್ಲಿ ಕಡಿಮೆ ಬೆಲೆಗೆ ನಾವು ಕೊಟ್ಟ ಪಡಿತರ ಅಕ್ಕಿಯೇ ಪಾಲೀಶ್ ಮಾಡಿ ಹೆಚ್ಚಿನ ಬೆಲೆ ನಮಗೆ ಮಾರಾಟ ಮಾಡುತ್ತಾರೆ ಎಂಬುದನ್ನು ಜನ ಅರಿಯಬೇಕಿದೆ.
ಚಾ.ನಗರ ಜಿಲ್ಲೆಯಲ್ಲಿ ತಿಂಗಳಿಗೆ ಮೂರರಿಂದ ನಾಲ್ಕು ಪ್ರಕರಣಗಳು ಅಕ್ರಮ ಪಡಿತರ ಅಕ್ಕಿ ಸಾಗಾಟದ ಮೇಲೆ ದಾಖಲಾಗುತ್ತಿದೆ. ಆದರೂ ಕಾಳಸಂತೆಕೋರರು ಕಡಿಮೆಯಾಗದೆ ಹೆಚ್ಚಾಗಿ ಪಡಿತರ ಅಕ್ಕಿ ಮಾಫಿಯದಲ್ಲಿ ತೊಡಗಿಕೊಳ್ಳುತಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಆಹಾರ ನಿರೀಕ್ಷಕ ಎಂ.ಎನ್. ಪ್ರಸಾದ್, ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪಿಎಸ್ಐ ಸುಪ್ರೀತ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.