ಅಕ್ರಮವಾಗಿ ಸಾಗಿಸುತ್ತಿದ್ದ 12. 37 ಕ್ವಿಂಟಾಲ್ ಪಡಿತರ ಅಕ್ಕಿ ವಶ;ವ್ಯಕ್ತಿ ಅರೆಸ್ಟ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಅಕ್ರಮವಾಗಿ ಸಾಗಿಸುತ್ತಿದ್ದ 12. 37 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಆಹಾರ ಇಲಾಖೆ ಅಧಿಕಾರಿಗಳೊಡನೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ದಾಳಿ‌ ವೇಳೆ ವಾಹನ ಸಮೇತ ಅಕ್ಕಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಮಳವಳ್ಳಿ ತಾಲ್ಲೂಕು ದೊಡ್ಡಬಾಗಿಲು ಸಮೀಪದ ನರೀಪುರ ಗ್ರಾಮದ ಅಜ್ಗಲ್ ಆಲಿ ಬಂಧಿತ ಆರೋಪಿ.

ಈತ ಗ್ರಾಮೀಣ ಪ್ರದೇಶದ ನಾಗರಿಕರಿಂದ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ರೈಸ್ ಮಿಲ್ ಗಳಿಗೆ ಮಾರಾಟ ಮಾಡುತ್ತಿದ್ದ.

ಕೊಳ್ಳೇಗಾಲ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರಗೂರು ಬಳಿ ಗ್ರಾಮಾಂತರ ಠಾಣೆ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾಗ ನಿನ್ನೆ ಸಂಜೆ ಪಾಳ್ಯ ನರೀಪುರ ಮಾರ್ಗವಾಗಿ ಕೆ. ಎ. 13 ಬಿ 2920 ಸಂಖ್ಯೆಯ ಮಾಕ್ಸಿಮೊ ಗೂಡ್ಸ್  ವಾಹನದಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ವೇಳೆ ಈತ ಸಿಕ್ಕಿಬಿದ್ದಿದ್ದಾನೆ.

ಈ ವೇಳೆ ಪೊಲೀಸರು ವಾಹನ ತಡೆದು ಪರಿಶೀಲಿಸಿದಾಗ ವಾಹನದಲ್ಲಿ ಪಡಿತರ ಅಕ್ಕಿ ಸಾಗಿಸುತ್ತಿರುವುದು ಗೊತ್ತಾಗಿ ಕೂಡಲೇ ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಆಹಾರ ನಿರೀಕ್ಷಕ ಎಂ.ಎನ್. ಪ್ರಸಾದ್ ಅವರು  ಕೊಳ್ಳೇಗಾಲ ಗ್ರಾಮಾಂತರ ಠಾಣೆ ಆರಕ್ಷಕ ಉಪ ನಿರೀಕ್ಷ ಸುಪ್ರೀತ್ ರೊಡನೆ ಅಕ್ಕಿ ತುಂಬಿದ ಮಾಕ್ಸಿಮೊ ಗೂಡ್ಸ್ ವಾಹನವನ್ನು ಜಪ್ತಿ ಮಾಡಿ ಸೂಕ್ತ ಕ್ರಮಕ್ಕಾಗಿ ವಾಹನ ಮತ್ತು ಆರೋಪಿಯನ್ನು ಒಪ್ಪಿಸಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಎಂ.ಎನ್. ಪ್ರಸಾದ್ ಅವರು ನೀಡಿದ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಳಿಯಲ್ಲಿ ಆರಕ್ಷಕ ಉಪನಿರೀಕ್ಷಕ ಸುಪ್ರೀತ್ ಮುಖ್ಯ ಪೇದೆಗಳಾದ ರಾಜಪ್ಪ, ಶಾಂತರಾಜು, ಮನೋಹರ್, ಚಾಲಕ ನಂಜುಂಡಸ್ವಾಮಿ ಭಾಗವಹಿಸಿದ್ದರು.