ಸುರಪುರ: ಪತ್ನಿ ತನಗೆ ಗೌರವ ಕೊಡುತ್ತಿಲ್ಲ ಎಂದು ಕೋಪಗೊಂಡ ಪತಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸುರಪುರದಲ್ಲಿ ನಡೆದಿದೆ.
ಪಟ್ಟಣದ ಬಿ ಎಸ್ ಎನ್ ಎಲ್ ಕಚೇರಿ ಬಳಿಯ ಡೊಣ್ಣಿಗೇರಾದಲ್ಲಿ ಈ ಘಟನೆ ನಡೆದಿದ್ದು, ಸಂಗಪ್ಪ ಕಕ್ಕೇರಾ ಎಂಬಾತ ಈ ಕೃತ್ಯ ಎಸಗಿದ್ದಾನೆ.ಮರಿಯಮ್ಮ ಕೊಲೆಯಾದ ದುರ್ದೈವಿ.
ಭಾನುವಾರ ತಡರಾತ್ರಿ ಮನೆಯಲ್ಲಿ ಸಂಗಪ್ಪ ಪತ್ನಿಯೊಂದಿಗೆ ಜಗಳ ಮಾಡಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ನಂತರ ಕೊಡಲಿಯನ್ನು ಹಿಡಿದುಕೊಂಡೆ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆ ಮಾಡಿರುವ ಸಂಗಪ್ಪ ಕಕ್ಕೇರಾ ಮದ್ಯ ವ್ಯಸನಿಯಾಗಿದ್ದ,ಮೂಲತಃ ಕಕ್ಕೇರಾ ಪಟ್ಟಣದ ಬಳಿಯ ದೊಡ್ಡಿ ಒಂದರ ನಿವಾಸಿ.
ಆದರೆ ಮರಿಯಮ್ಮ ಗಂಡ ಸರಿಯಾಗಿಲ್ಲದ ಕಾರಣ ಬೇಸರಗೊಂಡು ಕಳೆದ ಒಂದು ವರ್ಷದಿಂದ ಸುರಪುರದ ಡೊಣ್ಣಿಗೇರಾದಲ್ಲಿನ ತಮ್ಮ ಹೆತ್ತವರ ಮನೆಯಲ್ಲಿ ವಾಸವಾಗಿದ್ದಳು.
ತವರು ಮನೆಯಲ್ಲಿದ್ದ ಮರೆಮ್ಮನ ನೋಡಲು ಸಂಗಪ್ಪ ಬಂದು ಹೋಗಿ ಮಾಡುತ್ತಿದ್ದ.
ಹಾಗೆಯೇ ಭಾನುವಾರ ತಡರಾತ್ರಿ ಒಂದು ಗಂಟೆಯ ವೇಳೆಗೆ ಮನೆಗೆ ಬಂದ ಸಂಗಪ್ಪ ಪತ್ನಿಯೊಂದಿಗೆ ಜಗಳ ತೆಗೆದು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಕೊಡಲಿ ಹಿಡಿದುಕೊಂಡೇ ಪೊಲೀಸ್ ಠಾಣೆಗೆ ಬಂದಿದ್ದಾನೆ.
ಸ್ಥಳಕ್ಕೆ ಸುರಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್ ನಾಯಕ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತ ಮಹಿಳೆಯ ಅಣ್ಣ ನೀಡಿದ ದೂರಿನ ಮೇರೆಗೆ ಸುರಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.