ಹುಣಸೂರು: ದೇವರು ವರ ಕೊಟ್ರು ಪೂಜಾರಿ ಬಿಡ ಅಂತ ಗಾದೆ ಮಾತಿದೆಯಲ್ಲ ಅದು ಹುಣಸೂರಿನಲ್ಲಿ ನಡೆದಿರುವ ಹೂಳೆತ್ತುವ ಕಾರ್ಯಕ್ಕೆ ಸಾಕ್ಷಿಯಾಗಿದೆ.
ಇದೇನಂತೀರಾ? ಸರ್ಕಾರ ರೈತರಿಗೆ, ಗ್ರಾಮಾಂತರ ಪ್ರದೇಶಗಳ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಕಾಲುವೆಗಳ ಹೂಳು ತೆಗೆದು ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿದು ಕೆರೆಗಳಿಗೆ ಸೇರಲಿ ಎಂಬ ಉದ್ದೇಶದಿಂದ ಕಾಲುವೆ ಹೂಳೆತ್ತುವ ಟೆಂಡರ್ ಕರೆದಿರುತ್ತದೆ.
ಆದರೆ ಈ ಟೆಂಡರ್ ಪಡೆದ ಮಹಾನುಭಾವರು ಅರೆಬರೆ ಕೆಲಸ ಮಾಡಿ ಇತ್ತ ಸರ್ಕಾರಕ್ಕೂ ಕೆಟ್ಟ ಹೆಸರು ಬರಬೇಕು ಜನರಿಗೂ ಒಳಿತಾಗಬಾರದು ಹಾಗೆ ಹಣ ನುಂಗಿ ಕೆಲಸ ಕಾರ್ಯವನ್ನು ಹಾಳು ಮಾಡುತ್ತಿದ್ದಾರೆ ಇದಕ್ಕೆ ಹುಣಸೂರು ನಗರದ ಕಾಲುವೆಗಳು ಉದಾಹರಣೆಯಾಗಿವೆ.
ಇತ್ತೀಚೆಗೆ ಹುಣಸೂರಿನ ಕಾಲುವೆಗಳ ಹೂಳು ತೆಗೆಯುವ ಕೆಲಸ ಮಾಡಲಾಗಿದೆ, ಆದರೆ ಹೂಳು ತೆಗೆಯುವ ಕಾರ್ಯ ಅರೆಬರೆ ಕೆಲಸ ಮಾಡಿದ್ದಾರೆ. ಅಂದರೆ ಸುಮಾರು ಒಂದು ಕಿಲೋಮೀಟರ್ ಗೂ ಹೆಚ್ಚು ದೂರ ಕಾಲುವೆಯ ಹೂಳು ತೆಗೆದು ಅದನ್ನು ಬೇರೆ ಕಡೆ ಸಾಗಿಸುವುದು ಬಿಟ್ಟು ರಸ್ತೆ ಉದ್ದಕ್ಕೂ ಹಾಕಿದ್ದಾರೆ. ಅಂದರೆ ಕಾಲುವೆಯ ಏರಿ ಮೇಲೆ ಸುರಿದಿದ್ದಾರೆ.ಅದು ಈಗ ರಾಡಿಯಾಗಿ ಕೆಸರು ಗದ್ದೆಯಾಗಿಬಿಟ್ಟಿದೆ.
ಹುಣಸೂರಿನ ಜನರು ಜಮೀನು ಕಡೆ ತೋಟದ ಕಡೆ ಹೋಗಬೇಕಾದರೆ ಇಂತಹ ಕಾಲುವೆ ಏರಿ ಮೇಲೆಯೇ ಹೋಗಬೇಕು. ಆದರೆ ಇತ್ತೀಚೆಗೆ ಮಳೆ ಸತತವಾಗಿ ಬರುತ್ತಿದೆ ಈ ಹೂಳಿನ ಕೆಸರಿನಲ್ಲಿ ಜಾರಿ ದ್ವಿಚಕ್ರ ವಾಹನ ಸವಾರರು ಬಿದ್ದಿದ್ದಾರೆ.ಅಷ್ಟೇ ಏಕೆ ಟ್ರ್ಯಾಕ್ಟರ್ ಕೂಡಾ ಮಗಚಿ ಬಿದ್ದಿತ್ತು ಅದೃಷ್ಟವಶಾತ್ ಯಾರಿಗೂ ಪ್ರಾಣಪಾಯವಾಗಲಿಲ್ಲ.
ಆದರೆ ಪ್ರತಿನಿತ್ಯ ಕೆರೆ ಏರಿ ಮೇಲೆ ಜನ ಓಡಾಡಲು ಅಂಜುವಂತಾಗಿದೆ ಹೂಳು ಕೆಸರು ಗದ್ದೆಯಂತಾಗಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು
ಆತಂಕ ವ್ಯಕ್ತಪಡಿಸಿದ್ದಾರೆ.

ಕೂಡಲೇ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಈ ಹೂಳನ್ನು ತೆಗೆದು ಜಮೀನು ಅಥವಾ ಗದ್ದೆಗೆ ಹಾಕಿಸಬೇಕು ಆಗ ರೈತರಿಗಾದರೂ ಇದು ಗೊಬ್ಬರವಾಗಿ ಅನುಕೂಲವಾಗುತ್ತದೆ ಎಂದು ಚಲುವರಾಜು ಹೇಳಿದ್ದಾರೆ.
ಹೀಗೆ ಸುಖಾ ಸುಮ್ಮನೆ ಯಾರಿಗೂ ಉಪಯೋಗವಾಗದಂತೆ ಮಾಡಿ ಹೂಳೆತ್ತುವ ನೆನಪಲ್ಲಿ ಹಣ ಹೊಡೆದು ಜನರಿಗೆ ಅನಾನುಕೂಲ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.