ಹುಣಸೂರು: ಹುಣಸೂರು ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಯಾಗುವ ಸಮೀಪದಲ್ಲೇ ಆಳುದ್ದದ ಗುಂಡಿ ತೆಗೆದು ಅಪಾಯಕ್ಕೆ ಆಹ್ವಾನ ನೀಡಲಾಗಿದೆ.
ಹುಣಸೂರು ಬಸ್ ನಿಲ್ದಾಣಕ್ಕೆ ತಾಲೂಕಿನಾದ್ಯಂತ ಗ್ರಾಮಾಂತರ ಪ್ರದೇಶ ಗಳಿಗೆ ಹೋಗುವ ಬಸ್ ಗಳು, ಮೈಸೂರು ಮಡಿಕೇರಿ,ಪಿರಿಯಾಪಟ್ಟಣ ಕೆಆರ್ ನಗರ ಮತ್ತಿತರ ಜಿಲ್ಲೆಗಳಿಗೆ ಹೋಗುವ ಬಸ್ ಗಳು ಬಂದು ಹೋಗುತ್ತಲೇ ಇರುತ್ತವೆ.
ಹುಣಸೂರು ಮಾಜಿ ಮುಖ್ಯಮಂತ್ರಿಗಳು ಡಿ ದೇವರಾಜ ಅರಸು ಅವರ ತವರು ತಾಲೂಕು. ಹಾಗಾಗಿ ಇದೊಂದು ಪ್ರಮುಖ ಪಟ್ಟಣವಾಗಿದೆ. ಇಲ್ಲೂ ಕೂಡ ವ್ಯಾಪಾರ,ವಾಣಿಜ್ಯ ನಡೆಯುವುದರಿಂದ ಹೆಚ್ಚಿನ ಜನರು ಹೊರಗಿನಿಂದ ಬಂದು ಹೋಗುತ್ತಾರೆ, ಬಹಳಷ್ಟು ಮಂದಿ ಬಸ್ ಗಳನ್ನೇ ಆಶ್ರಯಿಸಿರುವುದರಿಂದ ಬಸ್ ನಿಲ್ದಾಣಕ್ಕೆ ಬಂದು ಹೋಗಲೇಬೇಕಿದೆ.
ಹಾಗಾಗಿ ಜನ ಇಲ್ಲಿ ಸದಾ ಇದ್ದೇ ಇರುತ್ತಾರೆ.
ಬಸ್ ನಿಲ್ದಾಣದ ಆವರಣದಲ್ಲೇ ಜನರು ಬಸ್ ಕಾಯಲು ನಿಂತಿರುತ್ತಾರೆ.ಅಲ್ಲೇ ಪಕ್ಕದಲ್ಲಿ ಬಸ್ ಗಳು ನಿಲುಗಡೆಯಾಗುತ್ತವೆ.ಇಂತಹ ಕಡೆ ಉದ್ದಕ್ಕೂ ಆಳುದ್ದದ ಗುಂಡಿಯನ್ನು ತೆಗೆಯಲಾಗಿದೆ. ಏಕೆ ತೆಗೆದಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ರಾತ್ರಿ ಅಂತೂ ಈ ಜಾಗದಲ್ಲಿ ಲೈಟ್ ಇರುವುದಿಲ್ಲ, ಒಂದು ವೇಳೆ ಬಸ್ ಗಳು ಹಿಂದೆ ತೆಗೆಯಲು ಹೋದರೆ ಚಕ್ರ ಗುಂಡಿಗೆ ಉರುಳಿ ಅಪಾಯವಾಗುವುದು ಕಟ್ಟಿಟ್ಟ ಬುತ್ತಿ. ಜೊತೆಗೆ ಸಾರ್ವಜನಿಕರು ಆ ಕಡೆ ಈ ಕಡೆ ಸಂಚರಿಸುವಾಗ ಗುಂಡಿಗೆ ಬಿದ್ದರೂ ಅಪಾಯ ಗ್ಯಾರಂಟಿ. ಹೀಗಿರುವಾಗ ಗುಂಡಿ ತೆಗೆದಿದ್ದಾದರೂ ಏಕೆ ಎಂಬುದು ಯಾರಿಗೂ ಗೊತ್ತಿಲ್ಲ. ಕೇಳಿದರೂ ಸರಿಯಾದ ಉತ್ತರ ಕೊಡುವವರು ಇಲ್ಲಿ ಯಾರು ಇಲ್ಲ.
ಹೀಗೆ ಉದ್ದಕ್ಕೂ ಆಳುದ್ದದ ಗುಂಡಿ ತೆಗೆದು ಅಪಾಯವನ್ನು ಆಹ್ವಾನಿಸಿರುವ ಬಗ್ಗೆ ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ ತಾಲೂಕು ಅಧ್ಯಕ್ಷ ಚೆಲುವರಾಜು ಅವರು ಹುಣಸೂರಿನ ಬಸ್ ನಿಲ್ದಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರು ಉಡಾಫೆ ಉತ್ತರ ನೀಡಿದ್ದಾರೆ.
ಹೀಗೆ ಗುಂಡಿ ತೆಗೆದು ಬಿಟ್ಟಿದ್ದೀರಲ್ಲ,
ಜನರಿಗೆ ತೊಂದರೆ ಆಗಲ್ಲವೆ ಎಂಬ ಪ್ರಶ್ನೆಗೆ ಇದು ನಮ್ಮ ಸಂಸ್ಥೆಗೆ ಸೇರಿದ ಜಾಗ ನಾವು ಏನು ಬೇಕಾದರೂ ಮಾಡಿಕೊಳ್ಳುತ್ತೇವೆ ಇದಕ್ಕೂ ನಿಮಗೂ ಸಂಬಂಧವಿಲ್ಲ ಎಂದು ಉತ್ತರಿಸಿದ್ದಾರೆ ಎಂದು ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಉತ್ತರ ಕೊಡಬೇಕಿದೆ.
ಜೊತೆಗೆ ಗುಂಡಿಯನ್ನು ಕೂಡಲೇ ಮುಚ್ಚಿಸಿ ಸಾರ್ವಜನಿಕರಿಗೆ ಮತ್ತು ಬಸ್ ಚಾಲಕ ನಿರ್ವಾಹಕರಿಗೆ ಆಗುವ ಅಪಾಯವನ್ನು ತಪ್ಪಿಸಬೇಕೆಂದು ಚಲುವರಾಜು ಒತ್ತಾಯಿಸಿದ್ದಾರೆ