ಸಿದ್ದನಕೊಪ್ಪಲು ಚರಂಡಿ ರಾಡಿ;ಡೇಂಘಿಯಿಂದ ಬಳಲುತ್ತಿರುವ ಜನ!

Spread the love

ಹುಣಸೂರು: ಹುಣಸೂರು ತಾಲೂಕು ಬೀಜಗನಹಳ್ಳಿ ಗ್ರಾಮ ಪಂಚಾಯಿತಿ ಮತ್ತು ರಾಮ ಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದನ ಕೊಪ್ಪಲು ಕಿರಿಜಾಜಿ ಗ್ರಾಮದ ಚರಂಡಿ ನೀರು ತುಂಬಿ ಜನರಿಗೆ ಮಾರಕವಾಗಿದೆ.

ಸಿದ್ದನ ಕೊಪ್ಪಲು ರಸ್ತೆಯಿಂದ ಕಿರಿಜಾಜಿ ಗ್ರಾಮದ ಕಡೆಗೆ ಸಾಗುವ ಈ ಚರಂಡಿ ಸತತ ಮಳೆಯಿಂದಾಗಿ ನೀರು ತುಂಬಿಕೊಂಡು ಕೆಸರಿನಿಂದ ರಾಡಿಯಾಗಿದೆ.

ಈ ಚರಂಡಿ ಜಮೀನಿನಲ್ಲಿ ಹಾದು ಹೋಗುವುದರಿಂದ ಜಮೀನಿನ ಮಾಲೀಕರು ತಮ್ಮ ಜಮೀನಿಗೆ ತೊಂದರೆಯಾಗುತ್ತದೆ ಎಂದು ಚರಂಡಿ ಪೂರ್ಣಗೊಳ್ಳಲು ಅವಕಾಶ ಮಾಡಿಕೊಟ್ಟಿಲ್ಲ ಹಾಗಾಗಿ ಡ್ರೈನೇಜ್ ಅರ್ಧಕ್ಕೆ ನಿಂತು ನೀರು ಅಲ್ಲೇ ನಿಲ್ಲುವಂತಾಗಿಬಿಟ್ಟಿದೆ.

ಮಳೆಯಿಂದಾಗಿ ನೀರು ತುಂಬಿಕೊಂಡಿರುವುದರಿಂದ ನೀರು ಮುಂದೆ ಸಾಗದೆ ಮನೆಗಳ ಕಾಂಪೌಂಡ್ ಮತ್ತು ಮನೆಗಳಿಗೂ ನುಗ್ಗಿ ರಾಡಿ ಆಗುತ್ತಿದೆ ಎಂದು ಸ್ಥಳೀಯರಾದ ಸುವರ್ಣ, ಪರಮೇಶ್ ಮತ್ತಿತರರು ಆತಂಕ ವ್ಯಕ್ತಪಡಿಸಿದ್ದಾರೆ.

ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಜೊತೆ ಮಾತನಾಡಿದ ಅವರುಗಳು ಚರಂಡಿಯಲ್ಲಿ ನೀರು ತುಂಬಿಕೊಂಡು ಗಬ್ಬೆದ್ದುಹೋಗಿದೆ.

ನೀರಿನಲ್ಲಿ ಹೂಳು ತುಂಬಿಕೊಂಡು ಸೊಳ್ಳೆಗಳ ಕಾಟ ವಿಪರೀತವಾಗಿದ್ದು,ನಾಲ್ಕೈದು ಮಂದಿಗೆ ಡೇಂಘಿ‌ ಬಂದಿದೆ, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಊರಿನ ಜನ ಆತಂಕ‌ ಪಟ್ಟಿದ್ದಾರೆ.

ನಾವು ಪದೇ ಪದೇ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಇ ಒ ಗಳಿಗೆ ದೂರ ಕೊಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇ ಒ ಅವರು ಗ್ರಾಮಕ್ಕೆ ಬಂದು ಪರಿಶೀಲನೆ ಮಾಡಿ ಹೋಗಿ 15 ದಿನಗಳಾಗಿದೆ.ಆದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಜನ ಆಕ್ರೋಶ‌ ವ್ಯಕ್ತಪಡಿಸಿದರು.

ಚರಂಡಿ ತುಂಬಿರುವುದರಿಂದ ಮಕ್ಕಳು ಓಡಾಡುವುದು ಕಷ್ಟವಾಗಿದೆ, ಜಾರಿ ಬಿದ್ದರೆ ಗೊತ್ತಾಗುವುದಿಲ್ಲ, ಹಿರಿಯ ನಾಗರಿಕರು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ ಎಂದು ಸುವರ್ಣ ಅಳಲು ತೋಡಿಕೊಂಡಿದ್ದಾರೆ.

ಈ‌ ಬಗ್ಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಕೂಡ ವರ್ಷಿಣಿ ನ್ಯೂಸ್‌ ಜೊತೆ ಮಾತನಾಡಿದ್ದಾರೆ.

ಡ್ರೈನೇಜ್ ಸರಿ ಇಲ್ಲದಿರುವ ಬಗ್ಗೆ ದೂರು ನೀಡಲಾಗಿದೆ.ಪಿಡಿಒ ಅವರನ್ನು ಕೇಳಿದರೆ ತಮಗೆ ವರ್ಗಾವಣೆಯಾಗಿದೆ ಇದಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳುತ್ತಾರೆ ಜನಪ್ರತಿನಿಧಿಗಳು ಇತ್ತ ತಿರುಗಿ ನೋಡುವುದಿಲ್ಲ ನಾವು ಯಾರನ್ನು ಕೇಳಬೇಕು ಎಂದು ಪ್ರಶ್ನಿಸಿದ್ದಾರೆ.

ಸಿದ್ದನ ಕೊಪ್ಪಲು-ಕಿರಿಜಾಜಿ ಚರಂಡಿ ಅವ್ಯವಸ್ಥೆ ಇಂದು,ನಿನ್ನೆಯದಲ್ಲಾ, ಕಳೆದ ಒಂದು ವರ್ಷದಿಂದ ಚರಂಡಿ ಹೀಗೆ ಗಬ್ಬೆದ್ದು ಹೋಗಿದೆ.ಹೂಳು ತುಂಬಿಕೊಂಡು ಗಬ್ಬು ವಾಸನೆ ಬೀರುತ್ತದೆ ಊಟ ಕೂಡಾ ಮಾಡಲಾಗುವುದಿಲ್ಲ.ಗ್ರಾಮ ಪಂಚಾಯಿತಿ ಸದಸ್ಯರು ಬಂದು ನೋಡುವುದಿಲ್ಲ‌ ಎಂದು ಸ್ಥಳೀಯ ಜನತೆ‌ ಆರೋಪಿಸಿದ್ದಾರೆ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು,ಜನಪ್ರತಿನಿಧಿಗಳು ಸಿದ್ದನಕೊಪ್ಪಲು‌ ಚರಂಡಿಯನ್ನು ಸರಿಪಡಿಸಿ ಗ್ರಾಮದ ಜನರಿಗೆ ಅನುಕೂಲ ಮಾಡಿಕೊಟ್ಟು ರೋಗರುಜಿನಗಳಿಂದ ಪಾರು ಮಾಡಿಯಾರೆ ಎಂಬುದನ್ನು ಕಾದು ನೋಡಬೇಕಿದೆ.