ಹುಣಸೂರು: ಹುಣಸೂರಿನ ಹೃದಯ ಭಾಗ, ನಗರ ಸಭೆ ಮುಂಭಾಗದಲ್ಲೇ ಇರುವ ಸಂವಿಧಾನ ವೃತ್ತದ ಸುತ್ತಮುತ್ತ ದೊಡ್ಡ ದೊಡ್ಡ ಗುಂಡಿಗಳಾಗಿದ್ದು ಮಳೆ ನೀರು ತುಂಬಿ ರಾಡಿಯಾಗಿದ್ದರು ಗಮನಿಸುವವರೇ ಇಲ್ಲದಿರುವುದು ದುರಂತವೇ ಸರಿ.
ಈ ವೃತ್ತವನ್ನು ನೋಡಿದರೆ ರಸ್ತೆಯೊ ಕೆಸರು ಗದ್ದೆಯೊ ಅನಿಸುತ್ತದೆ.ಬರೀ ಹೊಂಡಗಳೇ ಕಾಣುತ್ತವೆ.ನೀರು ತುಂಬಿದಾಗ ವಾಹನ ಸವಾರರು ಕಾಣದೆ ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ.
ಸ್ಥಳೀಯ ಶಾಸಕ ಜಿ.ಡಿ.ಹರೀಶ್ ಗೌಡರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ.ಅವರ ಕಣ್ಣಿಗೆ ಈ ರಸ್ತೆ ಗಂಡಿಗಳು ಕಾಣುವುದಿಲ್ಲವೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಕಾರವಾಗಿ ಪ್ರಶ್ನಿಸಿದ್ದಾರೆ.
ಇಡೀ ಹುಣಸೂರು ಗುಂಡಿಮಯವಾಗಿದೆ.
ನಗರಸಭೆ ಮುಂಭಾಗದಲ್ಲೇ ಸಂವಿಧಾನ ಸರ್ಕಲ್ ಇದೆ.ಇಲ್ಲಿನ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಹೆಸರಿಗೆ ಸಂವಿಧಾನ ಸರ್ಕಲ್, ಆದರೆ ಇದಕ್ಕೆ ಕನಿಷ್ಟ ಒಂದು ತಡೆಗೋಡೆ ಕೂಡಾ ಇಲ್ಲದಿರುವುದು ದುರ್ದೈವದ ಸಂಗತಿ.
ಹೀಗೆ ವೃತ್ತಗಳನ್ನು ಮಾಡಿ ಅಭಿವೃದ್ಧಿ ಪಡಿಸದೆ ಅಂತಹಾ ಮಹಾನ್ ನಾಯಕನಿಗೆ ಏಕೆ ಅವಮಾನ ಮಾಡುತ್ತೀರಿ ಎಂದು ಚೆಲುವರಾಜು ಕಾರವಾಗಿ ಪ್ರಶ್ನಿಸಿದ್ದಾರೆ.
ಈ ವೃತ್ತದಲ್ಲಿ ಸದಾ ವಾಹನ ಸಂಚಾರ ಇದ್ದೇ ಇರುತ್ತದೆ.ಜನಸಂದಣಿಯೂ ಹೆಚ್ಚಿರುತ್ತದೆ. ಗುಂಡಿಗಳ ನೀರು ಬೇರೆಯವರಿಗೆ ಎರಚಿ ಜಗಳಗಳಾದ ಉದಾಹರಣೆ ಕೂಡಾ ಇದೆ.
ಕೂಡಲೇ ಸಂವಿಧಾನ ಸರ್ಕಲ್ ಸರಿಪಡಿಸಬೇಕು ಮತ್ತು ಅಂಬೇಡ್ಕರ್ ಅವರ ಪ್ರತಿಮೆ ಅಥವಾ ಭಾವಚಿತ್ರವನ್ನು ಅಳವಡಿಸಬೇಕು, ಈ ಭಾಗದ ರಸ್ತೆಗಳ ಗುಂಡಿಗಳನ್ನು ಮುಚ್ಚಿ ಸರಿಪಡಿಸಿ ರಸ್ತೆಯನ್ನು ಅಭಿವೃದ್ಧಿಪಡಿಸಿ ವೃತ್ತವನ್ನು ಸುಂದರವಾಗಿ ಕಾಣುವಂತೆ ಮಾಡಬೇಕು ಎಂದು ಚೆಲುವರಾಜು ಅವರು ಶಾಸಕರು ಮತ್ತು ನಗರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

