ಹುಣಸೂರು: ಹುಣಸೂರು ತಾಲೂಕಿನ ಕೆಬ್ಬೇ ಕೊಪ್ಪಲು ಕಾಲೋನಿಯಲ್ಲಿ ಸುಮಾರು 25 ಗುಡಿಸಲುಗಳಿದ್ದು ಇಲ್ಲಿನ ಜನ ಜೀವಿಸಲು ಪರದಾಡುತ್ತಿದ್ದಾರೆ.
ಈ ಗುಡಿಸಲಿನಲ್ಲಿ ವಾಸ ಮಾಡುವವರು ಗ್ರಾಮಗಳಲ್ಲಿ ಅಲೆಯುತ್ತ ಸರ್ಕಸ್ ಮಾಡಿ ನಾಲ್ಕು ಕಾಸು ಸಂಪಾದನೆ ಮಾಡಿ ಜೀವನ ನಡೆಸುತ್ತಾರೆ, ಸುಮಾರು 70 ವರ್ಷಗಳಿಂದ ಇವರು ಗುಡಿಸಲಿನಲ್ಲೇ ವಾಸ ಮಾಡುತ್ತಿದ್ದಾರೆ.
ಕಟ್ಟ ಕಡೆಯ ವ್ಯಕ್ತಿಗೂ ಸೂರು ಇರಬೇಕು, ನೆಮ್ಮದಿಯಿಂದ ಜೀವನ ಮಾಡಬೇಕು ಎಂದು ಸರ್ಕಾರಗಳು ಹೇಳುತ್ತಲೇ ಬರುತ್ತಿವೆ ಆದರೆ ಈ ಸರ್ಕಸ್ ಮಾಡಿ ಜೀವನ ಸಾಗಿಸುತ್ತಿರುವವರು ಗುಡಿಸಲಿನಲ್ಲಿ ಇದ್ದಾರೆ ಮಳೆ ಬಂದಾಗ ನೀರು ಸೋರುತ್ತದೆ ಆದರೂ ಅನಿವಾರ್ಯ ವಾಗಿ ಈ ಜನ ಇಲ್ಲೇ ಇದ್ದರೆ,ಆದರೇ ಇವರ ಬವಣೆಯನ್ನು ಕೇಳುವವರೂ ಇಲ್ಲ,ನೋಡುವವರೂ ಇಲ್ಲ.
ಕಾಂಗ್ರೆಸ್ ಸರ್ಕಾರ ಈ ಕಡೆ ಗಮನ ಹರಿಸಿಯೇ ಇಲ್ಲ, ಸ್ಥಳೀಯ ಶಾಸಕ ಹರೀಶ್ ಗೌಡರು ಗಮನ ಹರಿಸದಿರುವುದು ದುರ್ದೈವ ಸಂಗತಿ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಪಕ್ಷದ ಸ್ಥಳೀಯ ಅಧ್ಯಕ್ಷ ರವಿ ಅವರು ತಮ್ಮ ಜನರ ಪರವಾಗಿ ನಮ್ಮಲ್ಲಿ ಅಳಲು ತೋಡಿಕೊಂಡಿದ್ದು ಕೂಡಲೇ ನಮ್ಮ ಜನರಿಗೆ ಸಣ್ಣ ಮನೆಗಳನ್ನು ಕಟ್ಟಿಸಿ ಕೊಡಬೇಕೆಂದು ಕೋರಿದ್ದಾರೆ.
ಆರು ತಿಂಗಳ ಹಿಂದೆಯೇ ಮನೆ ನಿರ್ಮಿಸಿಕೊಡುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ಅವರಿಗೆ ಮನವಿಯನ್ನು ಕೊಟ್ಟಿದ್ದೇವೆ ಆದರೂ ಏನು ಪ್ರಯೋಜನವಾಗಿಲ್ಲ ಎಂದು ದೂರಿದರು.
ಹಿಂದೆ ಇದ್ದ ಶಾಸಕ ಮಂಜುನಾಥ್ ಅವರು 10 ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರಂತೆ ಆದರೆ ಈಗಿನ ಶಾಸಕ ಹರೀಶ್ ಗೌಡರು ಒಂದು ಮನೆಯನ್ನು ಕಟ್ಟಿಸಿ ಕೊಟ್ಟಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸರ್ಕಾರ ಉಳ್ಳವರಿಗೆ ಮನೆಗಳನ್ನು ಕೊಡುತ್ತದೆ ಆದರೆ ಹೀಗೆ ಗುಡಿಸಲಿನಲ್ಲಿ ಜೀವಿಸಿವವರಿಗೆ ಮನೆ ಕೊಡುವುದಿಲ್ಲ ಎಂದು ಚೆಲುವರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಷ್ಟೋ ಜನ ತಮ್ಮ ಮನೆಯನ್ನು ಟ್ರಾಕ್ಟರ್ ಗಳನ್ನು ನಿಲ್ಲಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ ಆದರೆ ಈ ಜನರು ರಾತ್ರಿ ಹಗಲು ಚಳಿ,ಮಳೆಯಲ್ಲಿ ಗುಡಿಸಲಲ್ಲಿ ವಾಸ ಮಾಡುವ ಪರಿಸ್ಥಿತಿ ಇದೆ.ಇದೆಲ್ಲ ಸರ್ಕಾರದ ಗಮನಕ್ಕೆ ಬರುವುದೇ ಇಲ್ಲ.
ಈ ಕೆಬ್ಬೇ ಕೊಪ್ಪಲು ಕಾಲೋನಿಯು ಮರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ. ಕಳೆದ 70 ವರ್ಷಗಳಿಂದ ಗುಡಿಸಲಲ್ಲಿ ವಾಸವಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ, ಪಿಡಿಒ ಆಗಲೀ, ಸ್ಥಳೀಯ ಜನಪ್ರತಿನಿಧಿಗಳಾಗಲೀ ಗಮನ ಹರಿಸದೆ ಇರುವುದು ಇವರ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಚಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಶಾಸಕರು ರಾಜ್ಯ ಸರ್ಕಾರದ ಗಮನ ಸೆಳೆದು ಈ ಕೆಬ್ಬೆಕೊಪ್ಪಲು ಕಾಲೋನಿ ಜನರಿಗೆ ಕೂಡಲೇ ಮನೆಗಳನ್ನು ನಿರ್ಮಿಸಿ ಕೊಡಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.
ಕೂಡಲೇ ಈ ಕಾಲೋನಿಗೆ ಸರಿಯಾದ ರಸ್ತೆ,ಒಳಚರಂಡಿ ವ್ಯವಸ್ಥೆ ಕೂಡಾ ಮಾಡಿಕೊಡಬೇಕಿದೆ.ಇವರೂ ಕೂಡಾ ನಾಗರೀಕರಂತೆ ಬದುಕಲು ಸರ್ಕಾರ ಆಸರೆ ಕಲ್ಪಿಸುವ ಅತ್ಯಗತ್ಯವಿದೆ.