ಹೊನ್ನಿಕುಪ್ಪೆ ಗ್ರಾಮದಲ್ಲಿ ಗಬ್ಬೆದ್ದು ಹೋಗಿವೆ ಚರಂಡಿಗಳು:ರೋಗದ ಭೀತಿಯಲ್ಲಿ ಜನತೆ

ಹುಣಸೂರು: ಹುಣಸೂರು ತಾಲೂಕು ಉದ್ದೂರು ಕಾವಲ್ ಗ್ರಮ ಪಂಚಾಯತಿ ವ್ಯಾಪ್ತಿಯ ಹೊನ್ನಿಕುಪ್ಪೆ ಗ್ರಾಮದಲ್ಲಿ ‌ಚರಂಡಿಗಳು ತುಂಬಿ ಹುಳುಗಳು,ಸೊಳ್ಳೆಕಾಟ ಹೆಚ್ಚಾಗಿದ್ದು ರೋಗ ರುಜಿನಗಳ ತಾಣವಾಗಿದೆ,ಜನ ಆತಂಕಕ್ಕೆ ಒಳಗಾಗಿದ್ದಾರೆ.

ಈಗಾಗಲೇ ಹಲವಾರು ಮಂದಿ ರೋಗರುಜಿನಗಳಿಂದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊನ್ನಿಕುಪ್ಪೆ ಗ್ರಾಮದಲ್ಲಿ ಚರಂಡಿಗಳ ಹೂಳನ್ನು ತೆಗೆದದ್ದು ಇಲ್ಲವೇ ಇಲ್ಲ. ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ತುಂಬಿಕೊಂಡು ಮುಂದೆ ಹೋಗದೆ ಗಬ್ಬು‌ವಾಸನೆ ಬರುತ್ತಿದೆ‌ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆರೋ ಪಿಸಿದ್ದಾರೆ.

ಸಾಮಾನ್ಯವಾಗಿ ಆಶಾ ಕಾರ್ಯಕರ್ತೆಯರು ಗ್ರಾಮಗಳಲ್ಲಿ ಮಹಿಳೆಯರು, ಮಕ್ಕಳನ್ನು ಭೇಟಿಯಾಗಿ ರೋಗಗಳ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ತಿಳುವಳಿಕೆ ಮೂಡಿಸುತ್ತಾರೆ. ಆದರೆ ಹೊನ್ನಿಕುಪ್ಪೆ ಗ್ರಾಮದಲ್ಲಿ ಆಶಾ ಕಾರ್ಯಕರ್ತೆ ಮನೆ ಮುಂದೆಯೇ ಚರಂಡಿ ಕಟ್ಟಿಕೊಂಡು ಕೆಟ್ಟ ವಾಸನೆ ಬರುತ್ತಿದ್ದರೂ ಅವರು ಸಹ ಯಾರ ಗಮನಕ್ಕೂ ತಾರದೆ ಇರುವುದು ದುರ್ದೈವದ ಸಂಗತಿ ಎಂದು ಚೆಲುವರಾಜು ಬೇಸರ ವ್ಯಕ್ತಪಡಿಸಿದ್ದಾರೆ.

ಕೂಡಲೇ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲಿ, ಪಿಡಿಒ ಮತ್ತು ಇತರೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಹೊನ್ನಿ ಕುಪ್ಪೆ ಗ್ರಾಮದ ಚರಂಡಿಗಳನ್ನು ಸರಿಪಡಿಸಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.