ಹುಣಸೂರು ಬಸ್ ನಿಲ್ದಾಣದಲ್ಲಿದ್ದ ವಾಹನ ನಿಲುಗಡೆ‌ ಶೆಡ್ ಏಕಾಏಕಿ ತೆರವು:ಆಕ್ರೋಶ

Spread the love

ಹುಣಸೂರು: ಹುಣಸೂರು ನಗರದ ಹೊಸ ಬಸ್ ನಿಲ್ದಾಣದ ಒಳಭಾಗದಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿರುವ ಶೆಡ್ ತೆರವುಗೊಳಿಸುತ್ತಿದ್ದು, ಯಾವ ಕಾರಣಕ್ಕಾಗಿ ಈ ಶೆಡ್ ತೆರವುಗೊಳಿಸುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಗ್ರಹಿಸಿದ್ದಾರೆ

ಇದು ಸಾರ್ವಜನಿಕ ಸ್ವತ್ತು,ಇದನ್ನು ಉಳಿಸುವ ನಿಟ್ಟನಲ್ಲಿ ನಾವು ಹೋರಾಟ ಮಾಡುತ್ತೇವೆ‌ ಎಂದು ಎಚ್ಚರಿಸಿದರು.

ಬಹಳ ವರ್ಷಗಳಿಂದ ಇದ್ದ ಶೆಡ್ಡನ್ನು ಏಕಾಏಕಿ ತೆರವುಗೊಳಿಸಲಾಗಿದೆ. ಸರ್ಕಾರದಿಂದ ಲಕ್ಷಾಂತರ ಹಣ ಖರ್ಚು ಮಾಡಿ ಈ ಶೆಡ್ ನಿರ್ಮಿಸಲಾಗಿತ್ತು.ಈಗ ಶೆಡ್ ತರವುಗೊಳಿಸುವ ಮೂಲಕ ಸರ್ಕಾರಕ್ಕೆ ನಷ್ಟವುಂಟಾಗಿದೆ ಇದನ್ನೆಲ್ಲ ಹೇಳುವವರು ಕೇಳುವವರು‌ ಯಾರು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸ್ ನಿಲ್ದಾಣದ‌ ಅಧಿಕಾರಿಗಳು ಯಾವ ಆದೇಶದ ಅನ್ವಯ ಈ ಶೆಡ್ಡನ್ನು ತೆರವುಗೊಳಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಕೊಡಿಸ ಬೇಕೆಂದು ಹಿರಿಯ ಅಧಿಕಾರಿಗಳನ್ನು ಅವರು ಒತ್ತಾಯಿಸಿದರು.

ಹುಣಸೂರು ಉಪವಿಭಾಗ ಕೇಂದ್ರವಾಗಿರುವುದರಿಂದ 6 ತಾಲ್ಲೂಕುಗಳಿಂದ ಜನ ಬಂದು ಹೋಗುವ ಪ್ರದೇಶವಾಗಿದೆ.ಎಷ್ಟೋ ಮಂದಿ ಈ ಶೆಡ್ ನಲ್ಲಿ ವಾಹನ ನಿಲ್ಲಿಸಿ ಕೆಲಸ ಮುಗಿದ ನಂತರ ತೆಗೆದುಕೊಂಡು ಹೋಗುತ್ತಿದ್ದರು.

ಸರ್ಕಾರಿ ಶಾಲೆಗಳು ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದರೂ ದುರಸ್ಥಿಪಡಿಸಲು ಹಿಂದೇಟು ಹಾಕುತ್ತಿರುವ ಈ ಸಂದರ್ಭದಲ್ಲಿ ಖಾಸಗಿ ವಾಹನಗಳ ನಿಲುಗಡೆಗಾಗಿ ಅಗತ್ಯವಿರುವ ಶೆಡ್ಡನ್ನು ತೆರವುಗೊಳಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಕೂಡಲೇ ಶೆಡ್ ತೆರವುಗೊಳಿಸುವುದನ್ನು ಹಾಗೂ ಪದಾರ್ಥಗಳನ್ನು ಸಾಗಿಸುವುದನ್ನು ನಿಲ್ಲಿಸಬೇಕು ಎಂದು ಚಲುವರಾಜು ಒತ್ತಾಯಿಸಿದರು.

ಒಂದು ವೇಳೆ ಶೆಡ್ ತೆರವುಗೊಳಿಸುವುದನ್ನು ತಡೆಹಿಡಿಯದಿದ್ದರೆ ಲೋಕಾಯುಕ್ತರಿಗೆ ಹಾಗೂ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.

ಇಲ್ಲಿದ್ದ ಶೆಡ್ ಚೆನ್ನಾಗಿಯೇ ಇತ್ತು ಗ್ರಾಮಾಂತರ ಪ್ರದೇಶಗಳ ಜನ ಇಲ್ಲಿ ವಾಹನ ನಿಲ್ಲಿಸಿ ಹೋಗುತ್ತಿದ್ದರು.ಇದೀಗ ಟೆಂಡರ್ ಕರೆಯದೆಯೇ ಶೆಡ್ ತೆರವುಗಳಿಸಲಾಗಿದೆ ಇದರಲ್ಲಿ ಯಾರು ಶಾಮೀಲಾಗಿದ್ದಾರೊ ಅವರ‌ ವಿರುದ್ಧ ಕ್ರಮ ಜರುಗಿಸಬೇಕು, ಶೆಡ್ ಇದೇ ಸ್ಥಳದಲ್ಲಿ ಆಗಬೇಕು ಎಂದು ಕೆ ಎಸ್ ಆರ್ ಟಿ ಸಿ ಹಿರಿಯ ಅಧಿಕಾರಿಗಳನ್ನು ಚಲುವರಾಜು ಆಗ್ರಹಿಸಿದರು.