ಮೈಸೂರು: ಮೈಸೂರು ಪಾರಂಪರಿಕ ನಗರದಲ್ಲಿ ನಿರಂತರವಾಗಿ ಪ್ರವಾಸೋದ್ಯಮ ಹಾಗೂ ಹೋಟೆಲ್ ಮಾಲೀಕರು ಹಾಗೂ ಉದ್ಯಮಿಗಳ ಹಿತವನ್ನು ಕಾಯುತ್ತಾ ಬಂದಿರುವ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡರಿಗೆ ರಾಜ್ಯಮಟ್ಟದ
ಅತಿಥ್ಯ ರತ್ನ ಪ್ರಶಸ್ತಿ ಬಂದಿರುವುದು ಮೈಸೂರಿಗರಿಗೆ ಹೆಮ್ಮೆಯ ವಿಚಾರ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ನಗರದ ವಿಶ್ವೇಶ್ವರ ನಗರದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಹೋಟೆಲ್ ಮಾಲೀಕರ ಸಂಘದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಉದ್ಯಮ ಕ್ಷೇತ್ರದಲ್ಲಿ ರಾಜ್ಯಮಟ್ಟದ ಪ್ರತಿಷ್ಠಿತ ಅತಿಥ್ಯ ರತ್ನ 2025 ಪ್ರಶಸ್ತಿ ಪುರಸ್ಕೃತರಾದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ರವರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ, ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಾಕಷ್ಟು ಸಮಾಜಮುಖಿ ಸಂದೇಶ ಸಾರುವ ದಿನಗಳು ಮೈಸೂರಿನಲ್ಲಿ ಯಶಸ್ವಿಯಾಗಿ ನೆರವೇರಲು ಸ್ಥಳೀಯ ಸಂಘ ಸಂಸ್ಥೆಗಳು ಉದ್ಯಮಿಗಳು ಹಾಗೂ ಜಿಲ್ಲಾಡಳಿತದೊಂದಿಗೆ ಸೇತುವೆಯಾಗಿ ಕೆಲಸ ಮಾಡಿ ಮೈಸೂರಿನ ಹಿರಿಮೆಯನ್ನ ಹೆಚ್ಚಿಸುವಲ್ಲಿ ನಾರಾಯಣ ಗೌಡ ಅವರು ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು.
ಕೋವಿಡ್ ಸಂಧರ್ಭದಲ್ಲಿ ನಾರಸಯಣಗೌಡರು ಹೊಟೇಲುಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಸಿ ಸಾಮಾಗ್ರಿಗಳು ಮತ್ತು ವೈದ್ಯಕೀಯ ನೆರವು, ಕಾರ್ಮಿಕ ಇಲಾಖೆಯಿಂದ ಸಾಹಯಧನ ಕಲ್ಪಿಸಿದರು, ಆರ್ಥಿಕವಾಗಿ ತೊಂದರೆಯಲ್ಲಿದ್ದ ಸಣ್ಣಪುಟ್ಟ ಹೊಟೇಲು ಮಾಲೀಕರಿಗೆ ಯಾವುದೇ ತೊಂದರೆ ಬಾರದಂತೆ ಬೆನ್ನುಲುಬಾಗಿ ನಿಂತು ಮಾರ್ಗದರ್ಶನ ಮಾಡಿ ನೂರಾರು ಮಂದಿಯನ್ನ ಮೈಸೂರಿನ ಗಣ್ಯ ವ್ಯಕ್ತಿಯಾಗಿ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ್ದಾರೆ ಅವರಿಗೆ ಅತಿಥ್ಯ ರತ್ನ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ಎಂದು ಶ್ರೀವತ್ಸ ತಿಳಿಸಿದರು.
ಶಾಸಕ ಕೆ. ಹರೀಶ್ ಗೌಡ ಮಾತನಾಡಿ ಮೈಸೂರಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಲ್ಲಿ ಹೋಟೆಲು ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡರ ಪಾತ್ರ ಮಹತ್ವವಾದುದು ಎಂದು ಹೇಳಿದರು.
ಕಳೆದ ನಾಲ್ಕು ದಶಕಗಳಿಂದ ಮೈಸೂರು ದಸರಾ ಮತ್ತು ಹೊಸ ವರ್ಷದ ಆಚರಣೆ, ಆಷಾಢ, ದೀಪಾವಳಿ, ಬೇಸಿಗೆ ಮಾಸದ ಸಂಧರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ. ಸ್ಥಳೀಯರಿಗೆ ಉದ್ಯೋಗ ಸೃಷ್ಠಿ ಮತ್ತು ಮೈಸೂರಿನ ಪರಂಪರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡಿ ಸಾಕಷ್ಟು ಸಂಘ ಸಂಸ್ಥೆಗಳಿಂದ ಸರ್ಕಾರಕ್ಕೆ ಸಿಎಸ್ಆರ್ ನೆರವು ತಂದುಕೊಡಲು ಹಲವಾರು ಯೋಜನೆಗಳನ್ನ ಮಾರ್ಗದರ್ಶನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಣ್ಣಿಸಿದರು.
ಮೈಸೂರು ದಸರಾ ಸಂಧರ್ಭದಲ್ಲಿ ಪ್ರವಾಸಿಗರಿಗಾಗಿ ಆಹಾರ ಮೇಳ ಪರಿಕಲ್ಪನೆ ಆಯೋಜನೆ ಜಾರಿಗೆ ತರಲು ನಾರಾಯಣಗೌಡ ಅವರೇ ಮುಖ್ಯ ಕಾರಣ ಎಂದು ಹರೀಶ್ ಗೌಡ ಹೇಳಿದರು.
ಈ ಸಂದರ್ಭದಲ್ಲಿ ನೂರಾರು ಹೋಟೆಲ್ ಉದ್ಯಮಿಗಳು ವೈಯಕ್ತಿಕವಾಗಿ ಸನ್ಮಾನಿಸುವ ಮೂಲಕ ನಾರಾಯಣ ಗೌಡರನ್ನು ಅಭಿನಂದಿಸಿದರು.
ಸಮಾರಂಭದಲ್ಲಿ ಹೋಟೆಲ್ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಜಿ.ಕೆ ಶೆಟ್ಟಿ, ನಿಕಟಪೂರ್ವ ರಾಜ್ಯಾಧ್ಯಕ್ಷ ಎಂ ರಾಜೇಂದ್ರ, ರಾಜ್ಯ ಉಪಾಧ್ಯಕ್ಷರಾದ ರವಿ ಶಾಸ್ತ್ರಿ, ಕಾರ್ಯದರ್ಶಿ ಎ ಆರ್ ರವೀಂದ್ರ ಭಟ್, ಸುರೇಶ್ ಉಗ್ರಯ್ಯ, ಅಶೋಕ್ ಜಿ, ಸುಬ್ರಹ್ಮಣ್ಯ ತಂತ್ರಿ, ಅರುಣ್ ಕೆ ಎಸ್, ಭಾಸ್ಕರ್ ಶೆಟ್ಟಿ ಕೆ, ಪಿ ಎಸ್ ಶೇಖರ್ ಹಾಗೂ ನೂರಾರು ಹೋಟೆಲ್ ಉದ್ಯಮಿಗಳು ಉಪಸ್ಥಿತರಿದ್ದರು.