(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದ ಬಸ್ತೀಪುರ ಇತಿಹಾಸವುಳ್ಳ ಜೈನರ ಕ್ಷೇತ್ರ. ಕ್ರಿ. ಶ 7 ನೇ ಶತಮಾನದಲ್ಲಿ ಜೈನಮುನಿ ಶ್ರೀ ಪುಷ್ಪನಂದಿ ಮುನಿಗಳು ಮುಕ್ತಿಗಾಗಿ ಇಲ್ಲಿ ಸಲ್ಲೇಖನ ವ್ರತವನ್ನಾಚರಿಸಿದ್ದರು.
ಇದರ ನೆನಪಿಗಾಗಿ ಜಿನ ಭಕ್ತರು ಅಂದು ಕಲ್ಲಿನ ಅರೆಯ ಮೇಲೆ ಪಾದಗಳನ್ನು ಮತ್ತು ಸಂಸ್ಕೃತದಲ್ಲಿ ಜಿನ ಶಾಸನ ಬರೆಯಿಸಿದ್ದರು ಎಂದು ಕಲ್ಲಿನ ಶಿಲ್ಪ ಸಂಶೋಧಕರು ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯರಾದ ರಘು. ಆರ್ ತಿಳಿಸಿದರು.
ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹದ ಪ್ರಯುಕ್ತ ಭಗವಾನ್ ವಾಲ್ಮೀಕಿ ಟ್ರಸ್ಟ್ ಕೊಳ್ಳೇಗಾಲದ ವಿವಿಧ ಸಂಘಟನೆಗಳ ಸಹಾಯದೊಡನೆ 1 ರಿಂದ 10ನೇ ತರಗತಿ ಹಾಗೂ ಪಿಯುಸಿ ವರೆಗೆ ವಿವಿಧ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ.

ಇಂದು ಪಟ್ಟಣದ ಬಸ್ತೀಪುರ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದ ಅವರು ಕಲ್ಲಿನ ಅರೆಯ ಮೇಲೆ ಪಾದಗಳನ್ನು ಮತ್ತು ಸಂಸ್ಕೃತದಲ್ಲಿ ಬರೆಸಿದ್ದ ಜಿನ ಶಾಸನವನ್ನು ಸಾರ್ವಜನಿಕರು ಅಂದು ನೋಡಿದ್ದರು. ಮಾನವ ತನ್ನ ದುರಾಸೆಯಿಂದ ಪರಿಸರ ನಾಶ ಮಾಡಿದ್ದು,ಈಗ ಶಾಸನ ಬರೆಸಿದ್ದ ಸ್ಥಳ ಹಾಗೂ ಕಲ್ಲುಅರೆ ನೀರಿನ ಹೊಂಡಾ ಆಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ತಾಲ್ಲೂಕಿನ ಸರಗೂರು ಗ್ರಾಮದಲ್ಲಿ ಶ್ರೀ ಬಾಹುಬಲಿ ಮುನಿಯವರು ವೈಭವದಿಂದ ಸಲ್ಲೇಖನ ವ್ರತ ಆಚರಿಸಿ ಮುಕ್ತಿ ಹೊಂದಿದ್ದಕ್ಕೆ ಇಲ್ಲಿಯೂ ಶಾಸನ ಬರೆಸಿದ್ದಾರೆ. ಗಂಗರು ಹಾಗೂ ಚೋಳರ ಕಾಲದಲ್ಲಿ ಮುಡಿಗುಂಡ ಚತುರ್ವೇದಿ ಮಂಗಲ ಎಂದು ಶಾಸನದಲ್ಲಿ ಉಲ್ಲೇಖವಿದೆ ಅಂದು ಮುಡಿಗುಂಡಂ ಪಟ್ಟಣವಾಗಿತ್ತು ಎಂದು ತಿಳಿಸಿದರು.
ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳ ಶಾಲಾ ಮಕ್ಕಳಿಗೆ 1 ರಿಂದ 10ನೇ ತರಗತಿ ಹಾಗೂ ಪಿಯುಸಿ ವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕವನ್ನು ಸಂಘದ ನಿಯಮದಂತೆ ವಿತರಿಸಲಾಗುತ್ತಿದೆ. ಈ ಮಹತ್ಕಾರ್ಯಕ್ಕೆ ಚಿತ್ರಕಲಾ ಶಿಕ್ಷಕರು ಮತ್ತು ಕಾರ್ಯಕಾರಿ ಸಮಿತಿ,ಪಶುಸಂಗೋಪನೆ ಇಲಾಖೆ ಪಾಳ್ಯ, ಹಾಗೂ ಸಂಘದ ಎಲ್ಲಾ ಸದಸ್ಯರ ಸಹಾಯದಿಂದ ಈಗಾಗಲೇ ಮೇದಿನಿ ಗ್ರಾಮ, ಪಾಳ್ಯ ಗ್ರಾಮ, ಶ್ರೀ ಚೌಡೇಶ್ವರಿ ಶಾಲೆ, ಬಾಪುನಗರ ಸರ್ಕಾರಿ ಶಾಲೆ, ಮುಡಿಗುಂಡ, ಬಸ್ತೀಪುರ, ಮಾಸ್ತಿಗೌಡನ ದೊಡ್ಡಿ ಶಾಲೆಗಳ ಒಟ್ಟು 1001 ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕವನ್ನು ವಿತರಿಸಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಕೊಂಡು ಉತ್ತಮ ಭವಿಷ್ಯ ರೂಪಿಸಿ ಕೊಳ್ಳುವಂತೆ ರಘು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಅಧ್ಯಕ್ಷ ಸಿದ್ದಪ್ಪಾಜಿ, ಯಜಮಾನರಾದ ಬಸವರಾಜು, ರಂಗಸ್ವಾಮಿ, ಸಿದ್ದಮ್ಮ, ನಂದೀಶ, ಗೋವಿಂದ ನಾಯಕ, ಜೆಲ್ಲಿ ಸಿದ್ದಪ್ಪ, ಶಿವಕುಮಾರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.