ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಸದ್ದು ಮಾಡುತ್ತಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.
ಹನಿಟ್ರ್ಯಾಪ್ ಆರೋಪ ಪ್ರತ್ಯಾರೋಪದ ಬಗ್ಗೆ ಸತ್ಯಾಸತ್ಯತೆ ತಿಳಿಯಲು ತನಿಖೆಗೆ ಶೀಘ್ರವೇ ಆದೇಶಿಸಲಾಗುವುದು. ರಾಜಣ್ಣ ಅವರು ದೂರು ನೀಡಿದ ಕೂಡಲೇ ತನಿಖೆ ಮಾಡಿಸಲಾಗುವುದು ಎಂದು ಸದನದಲ್ಲಿ ತಿಳಿಸಿದರು.
ಈ ವೇಳೆ ಸಭಾಧ್ಯಕ್ಷ ಯು.ಟಿ.ಖಾದರ್ ಪರಮೇಶ್ವರ್ ಅವರ ಮಾತುಗಳನ್ನು ತದೇಕಚಿತ್ತದಿಂದ ಆಲಿಸಿ ಆಗಲಿ ಎಂದು ಹೇಳಿದರು.

ಹನಿಟ್ರ್ಯಾಪ್‌ಗೆ ಫುಲ್ ಸ್ಟಾಪ್ ಹಾಕಬೇಕು, ಹನಿಟ್ರ್ಯಾಪ್ ಎನ್ನುವುದು ಸದನದ ಎಲ್ಲ ಸದಸ್ಯರ ಮರ್ಯಾದೆ ಪ್ರಶ್ನೆ, ಗೌರವ ಗಳಿಸಿಕೊಂಡಿರುವ ನಾಯಕರ ಘನತೆಯನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಒಬ್ಬರು, ಇಬ್ಬರು ಸಚಿವರಿಗೆ ಹನಿಟ್ರಾಪ್ ಅಂತಲ್ಲಾ ಇದು ಎಲ್ಲರ ಮರ್ಯಾದೆಯ ಪ್ರಶ್ನೆ. ಸದನದ ಮರ್ಯಾದೆಯೂ ಹೌದು. ಹೀಗಾಗಿ ನಾನು ಈ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸುವೆ ಎಂದು ಪರಮೇಶ್ವರ್ ಹೇಳಿದರು.