ಮೈಸೂರು: ಭಾರತದಲ್ಲಿ ಹಿಂದು ಧರ್ಮ ಜಾಗೃತಿ ಮಾಡುವುದು ಅನಿವಾರ್ಯವಾಗಿದೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
ಮೈಸೂರಿನ ಶ್ರೀರಾಂಪುರದ ಕಲ್ಯಾಣ ಮಂಟಪದಲ್ಲಿ ನಡೆದ ಡಾ. ಪೃಥು ಪಿ ಅದ್ವೈತ್ ಉಪನಯನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ತೋತ್ರ ಪಠಣದಲ್ಲಿ ಮೂರು ವಿಶ್ವ ದಾಖಲೆ ನಿರ್ಮಿಸಿ ಎರಡು ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದಿರುವ ಎಂಟು ವರ್ಷದ ಬಾಲಕ ಪೃಥು ಪಿ ಅದ್ವೈತ್ ಮೈಸೂರು ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ.ಅವರ ಉಪನಯನ ಧರ್ಮ ಜಾಗೃತಿಯ ವೇದಿಕೆಯಾಗಿ ಪರಿಣಮಿಸಿರುವುದು ಸಂತೋಷದ ವಿಷಯ ಎಂದು ಪ್ರತಾಪ್ ಸಿಂಹ ಶ್ಲಾಘಿಸಿದರು.

ಶೃಂಗೇರಿ ಸ್ವಾಮಿಗಳು, ಪೇಜಾವರ ಶ್ರೀ ಗಳು, ಮಂತ್ರಾಲಯ ಶ್ರೀಗಳು, ಉತ್ತರಾದಿ ಮಠದ ಶ್ರೀಗಳು, ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಾಧಿಕಾರಿಗಳು ಸೇರಿದಂತೆ ಹಲವಾರು ಮಠಗಳಿಂದ ಆಶೀರ್ವಾದ ಮಾಡಿ ಹಾರೈಸಿ ಪೃಥುವಿನ ಉಪನಯನಕ್ಕೆ ಅನುಗ್ರಹಿಸಿರವುದನ್ನು ನೋಡಿದರೆ ಮುಂದೆ ಪೃಥುವಿನಿಂದ ಸನಾತನ ಧರ್ಮದ ಕಾರ್ಯಗಳನ್ನು ಮಾಡುವ ಜವಾಬ್ದಾರಿ ಎಷ್ಟಿದೆ ಎಂದು ತಿಳಿಯುತ್ತದೆ ಎಂದು ಹೇಳಿದರು.
ಮನುಷ್ಯ ತನಗಿರುವ ಷೋಡಷ ಸಂಸ್ಕಾರಗಳಿಂದ ವಿಮುಖನಾಗುತ್ತಿರುವ ಈ ಕಾಲಘಟ್ಟದಲ್ಲಿ ಅದರ ಮಹತ್ವವನ್ನು ಮತ್ತೆ ತಿಳಿಸುವುದು ಹಾಗೂ ಆಚರಿಸುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯ, ನಮ್ಮೆಲ್ಲರಲ್ಲಿ ಧರ್ಮ ಜಾಗೃತಿಯಾದಾಗ ಮಾತ್ರ ಧರ್ಮಬಲಗೊಳುತ್ತದೆ ಯುವಕರು ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ತೋರಬೇಕು ಎಂದು ಪ್ರತಾಪ್ ಸಿಂಹ ಕರೆ ನೀಡಿದರು.
ಈಗಾಗಲೇ ವಿಶ್ವ ದಾಖಲೆ ನಿರ್ಮಿಸಿರುವ ಪೃಥು ಪಿ ಅದ್ವೈತ್ ಉಪನಯನದಲ್ಲಿ ವಿಶೇಷವಾಗಿ ಧರ್ಮ ಜಾಗೃತಿ ಮೂಡಿಸುವ ಫಲಕಗಳು, ಅಹಂ ಬ್ರಹ್ಮಾಸ್ಮಿ, ತತ್ವಮಸಿ, ಮಾತೃ ದೇವೋ ಭವ, ಪಿತೃ ದೇವೋ ಭವ ಎಂಬ ವೇದ ಸಂದೇಶದ ಫಲಕಗಳು, ಅಯೋಧ್ಯೆ ಶ್ರೀರಾಮನ ಫೋಟೋ ನೀಡುವುದು ಹಾಗೂ ಧಾರ್ಮಿಕ ಆಚರಣೆಗಳನ್ನು ಮಾಡುವ ಪುಸ್ತಕಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ವಿಶೇಷವಾಗಿ ಧರ್ಮ ಜಾಗೃತಿ ಮಾಡಲಾಯಿತು.
ಈ ಸಂದರ್ಭದಲ್ಲಿ ಪೃಥು ಪಿ ಅದ್ವೈತ್ ಅವರ ಪೋಷಕರಾದ ಪುನೀತ್ ಜಿ ಕೂಡ್ಲೂರು, ಪೂಜಾ ಎನ್, ಕೆ.ಆರ್ ಗಣೇಶ್, ಸರಸ್ವತಿ , ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ನಿಶಾಂತ್ ಸೇರಿದಂತೆ ಕುಟುಂಬದ ಬಂಧು ಮಿತ್ರರು ಹಾಜರಿದ್ದರು.